ಅನ್ ಲಾಕ್ 3.0 ನಲ್ಲಿ ಯಾವುದಕ್ಕೆ ಅನುಮತಿ : ಥಿಯೇಟರ್ಸ್ ಸಿಗುತ್ತಾ ಗ್ರೀನ್ ಸಿಗ್ನಲ್
ಬೆಂಗಳೂರು : ರಾಜ್ಯದಲ್ಲಿ ಅನ್ ಲಾಕ್ 2.0 ಜುಲೈ 5ಕ್ಕೆ ಅಂತ್ಯವಾಗಲಿದೆ. ಈ ಹಿನ್ನೆಲೆಯಲ್ಲಿ ಅನ್ ಲಾಕ್ 3.0 ನಲ್ಲಿ ಯಾವುದಕ್ಕೆ ಅನುಮತಿ ನೀಡಬೇಕೆಂದು ನಾಳೆ ಕೋವಿಡ್ ಉಸ್ತುವಾರಿ ಸಚಿವರು ಹಾಗು ಹಿರಿಯ ಅಧಿಕಾರಿಗಳ ಜತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಹತ್ವದ ಸಭೆ ನಡೆಸಲಿದ್ದಾರೆ.
ನಾಳೆ ಸಂಜೆ 5.30ಕ್ಕೆ ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ಕೋವಿಡ್ ಉಸ್ತುವಾರಿ ಸಚಿವರು, ಅಧಿಕಾರಿಗಳ ಜತೆ ಸಿಎಂ ಯಡಿಯೂರಪ್ಪ ಸಭೆ ನಡೆಸಲಿದೆ. ಮೂಲಗಳ ಪ್ರಕಾರ ನಗರದಲ್ಲಿ ಮಾಲ್, ಸ್ವಿಮಿಂಗ್ ಪೂಲ್, ಸಿನಿಮಾ ಮಂದಿರಗಳ ಆರಂಭಕ್ಕೆ ಒತ್ತಡ ಬಂದಿದ್ದು, ಈ ಬಗ್ಗೆ ಚರ್ಚೆ ನಡೆಯಲಿದೆ.
ಸಿನಿಮಾ ಮಂದಿರಗಳ ಆರಂಭ, ದೇವಸ್ಥಾನಕ್ಕೆ ಭಕ್ತರ ಪ್ರವೇಶಕ್ಕೆ ಅವಕಾಶ, ಚರ್ಚ್, ಮಸೀದಿ ಸೇರಿ ಎಲ್ಲ ಸಮುದಾಯವರ ಪ್ರಾರ್ಥನಾ ಸ್ಥಳಗಳಿಗೂ ಆ ಸಮುದಾಯದ ಜನರ ಪ್ರವೇಶಕ್ಕೆ ಅವಕಾಶ, ವೀಕೆಂಡ್ ಕಫ್ರ್ಯೂ ತೆರವು, ರಾತ್ರಿ ಕಫ್ರ್ಯೂ ಅವಧಿ ಕಡಿತ, ವ್ಯಾಪಾರ ವಹಿವಾಟಿಗೆ ಸಂಜೆ 5ರ ಮಿತಿಯನ್ನು 7ಕ್ಕೆ ವಿಸ್ತರಣೆ ಕುರಿತು ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುತ್ತದೆ.