ತುಮಕೂರು : ಅವಿವಾಹಿತ ಮಹಿಳೆಯೊಬ್ಬರು ಅಕ್ರಮ ಸಂಬಂಧದಿಂದ ಗರ್ಭಿಣಿಯಾಗಿ, ನಂತರ ಹೆಣ್ಣು ಮಗುವನ್ನು ರಸ್ತೆಗೆ ಎಸೆದು, ಅದರ ಸಾವಿಗೆ ಕಾರಣವಾಗಿರುವ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ.
ಈ ಘಟನೆ ಜಿಲ್ಲೆಯ ಅರೇಗುಜ್ಜನಹಳ್ಳಿ ಪಂಚಾಯ್ತಿಯ ಗೌರಿಪುರ ಗ್ರಾಮದಲ್ಲಿ ನಡೆದಿದೆ. ತಾಯಿ ಅದನ್ನು ಬೀದಿಗೆ ಎಸೆದ ನಂತರ ಚಳಿ ಹೆಚ್ಚಾಗಿದ್ದರಿಂದಾಗಿ ಅದು ಸಾವನ್ನಪ್ಪಿದೆ ಎನ್ನಲಾಗಿದೆ. ಅವಿವಾಹಿತ ಮಹಿಳೆಯೊಬ್ಬರು ಅಕ್ರಮ ಸಂಬಂಧದಿಂದಾಗಿ ಗರ್ಭಿಣಿಯಾಗಿದ್ದರು. ಈ ವಿಚಾರವನ್ನು ಮನೆಯವರಿಗೆ ತಿಳಿಸಿರಲಿಲ್ಲ. ಸಡಿಲವಾದ ಉಡುಗೆ ತೊಟ್ಟು ಎಲ್ಲವನ್ನೂ ಮುಚ್ಚಿಟ್ಟಿದ್ದರು. ಆನಂತರ ಯಾರಿಗೂ ತಿಳಿಯದಂತೆ ಹೆರಿಗೆ ಮಾಡಿಕೊಂಡಿದ್ದರು. ನಂತರ ಸಮಾಜಕ್ಕೆ ಹೆದರಿ ಮಗುವನ್ನೇ ಬಯಲಿಗೆ ಎಸೆದಿದ್ದರು ಎನ್ನಲಾಗಿದೆ.
ಯುವತಿಗೆ ಪೋಷಕರಿಲ್ಲದ ಹಿನ್ನೆಲೆಯಲ್ಲಿ ಅಕ್ಕನ ಮನೆಯಲ್ಲಿ ಆಶ್ರಯ ಪಡೆದಿದ್ದಳು. ರಾತ್ರಿ ಮನೆಯಿಂದ ಹೊರಗೆ ಹೋಗಿ, ಸ್ವಯಂ ಹೆರಿಗೆ ಮಾಡಿಕೊಂಡಿದ್ದಳು. ನಂತರ ಮಗುವನ್ನ ಎಸೆದು ಬಂದಿದ್ದಳು. ಬೆಳಿಗ್ಗೆ ಮಗುವಿನ ಶವ ಸಿಕ್ಕಿದೆ. ಸ್ಥಳಕ್ಕೆ ಭೇಟಿ ಕೊಟ್ಟ ಆರೋಗ್ಯ ಇಲಾಖೆ ಸಿಬ್ಬಂದಿ, ಪೊಲೀಸರು ರಕ್ತಸ್ರಾವದಿಂದ ಬಳಲಿದ್ದ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಕುರಿತು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








