UP Assembly Election 2022: ಕುಲಗಳ ಕುರುಕ್ಷೇತ್ರದಲ್ಲಿ ಪಾರ್ಟಿಗಳ ಪ್ಲಾನಿಂಗ್
ಐದು ವರ್ಷಗಳ ಅವಧಿ ಮುಗಿಯುತ್ತಿದ್ದಂತೆ ಉತ್ತರ ಪ್ರದೇಶದಲ್ಲಿ ಮತ್ತೆ ಅಧಿಕಾರ ಹಿಡಿಯುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಪ್ರಯತ್ನಗಳು ಅಷ್ಟು ಸುಲಭವಾಗಿ ಯಶಸ್ವಿಯಾಗುವ ಸಾಧ್ಯತೆ ತೀರಾ ಕಡಿಮೆ ಇದೆ ಎನ್ನುತ್ತಿದೆ ಗ್ರೌಂಡ್ ರಿಪೋರ್ಟ್. ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಾರ್ಟಿ ಈ ಚುನಾವಣೆಯಲ್ಲಿ ಬಿಜೆಪಿಗೆ ತೀವ್ರ ಪೈಪೋಟಿ ನೀಡುವ ಎಲ್ಲ ಲಕ್ಷಣಗಳು ಕಾಣುತ್ತಿವೆ. ಇದರ ಜೊತೆಗೆ, ಇತ್ತೀಚಿನ ರೈತ ಚಳವಳಿಗಳ ಕೇಂದ್ರಬಿಂದುವಾಗಿರುವ ಪಶ್ಚಿಮ ಉತ್ತರ ಪ್ರದೇಶದ ರಾಜಕೀಯ ಪಕ್ಷಗಳ ಚುನಾವಣಾ ಮೈತ್ರಿಗಳು ಮತ್ತು ರಾಜಕೀಯ ಪಕ್ಷಗಳ ತಂತ್ರಗಳು ಬಿಜೆಪಿ ಕಣ್ಣಿಗೆ ನಿದ್ದೆ ಬಾರದಂತೆ ಮಾಡಿದೆ. ಜಾತಿಗಳ ಒಗ್ಗೂಡಿಸುವಿಕೆಯೊಂದಿಗೆ ಕಳೆದ ಚುನಾವಣೆಯ ವೈಭವವನ್ನು ಉಳಿಸಿಕೊಳ್ಳುವ ಬಿಜೆಪಿ ಆಶಯವನ್ನು ವಿಫಲಗೊಳಿಸಬೇಕೆಂದು ಸಮಾಜವಾದಿ ಪಕ್ಷವು ಪ್ರಯತ್ನಿಸುತ್ತಿದೆ. ಜಾಟರು, ಮುಸ್ಲಿಮರು ಮತ್ತು ರೈತರೇ ಹೆಚ್ಚಾಗಿರುವ ಈ ಪ್ರದೇಶದಲ್ಲಿ ಜಾತಿ, ಸಮುದಾಯದ ಮತಗಳನ್ನು ಕಸಿದುಕೊಳ್ಳಲು ಎಸ್ ಪಿ ಸರ್ವ ಪ್ರಯತ್ನ ಮಾಡುತ್ತಿದೆ. ಆರ್ಎಲ್ಡಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಮೂಲಕ ಜಾಟ್ ರನ್ನು ಸಮಾಧಾನಪಡಿಸುವಲ್ಲಿ ಎಸ್ಪಿ ಈಗಾಗಲೇ ಯಶಸ್ವಿಯಾಗಿದೆ. ಇತ್ತ ಜಾಟ್ ಗಳನ್ನು ವಿಭಜಿಸಿ ಮೈತ್ರಿ ತಂತ್ರಗಳನ್ನು ವಿಫಲಗೊಳಿಸುವ ಯೋಜನೆಗಳೊಂದಿಗೆ ಬಿಜೆಪಿ ಅಸ್ತ್ರಗಳನ್ನು ಹೂಡುತ್ತಿದೆ.
ಮುಸ್ಲಿಂ- ಜಾಟರ ಸಂಬಂಧ.. ಹೇಗಿದೆ..
ಆರ್ಎಲ್ಡಿ ನಾಯಕ ಜಯಂತ್ ಚೌಧರಿ ಅವರ ಅಜ್ಜ ಮತ್ತು ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ಅವರು ‘ಕಿಸಾನ್ ನಾಯಕರೆಂದು ಗುರುತಿಸಿಕೊಂಡವರು. ಅವರ ಕಾಲದಲ್ಲಿ ಮುಸ್ಲಿಮರು ಮತ್ತು ಜಾಟ್ ರು ಒಟ್ಟಾಗಿದ್ದರು. ಎಸ್ಪಿ-ಬಿಎಸ್ಪಿ ಹುಟ್ಟುವುದಕ್ಕೂ ಮೊದಲು, ಪಶ್ಚಿಮ ಯುಪಿ ಮುಸ್ಲಿಮರು ಚರಣ್ ಸಿಂಗ್ ಅವರನ್ನು ಬೆಂಬಲಿಸಿದ್ದರು. ಇದನ್ನೇ ಅಜಿತ್ ಸಿಂಗ್ ಕೂಡ ರಾಜಕೀಯದಲ್ಲಿ ಮುಂದುವರೆಸಿಕೊಂಡು ಬಂದರು. ಆದರೆ, 2013ರ ಮುಜಾಫರ್ನಗರ ಗಲಭೆಯಿಂದ ಜಾಟ್-ಮುಸ್ಲಿಂ ಬಾಂಧವ್ಯಕ್ಕೆ ಧಕ್ಕೆಯಾಯಿತು. ಗಲಭೆಯ ನಂತರ, ಎರಡು ಸಮುದಾಯಗಳ ನಡುವೆ ಬಿರುಕು ಮೂಡಿ ಮುಸ್ಲಿಮರು ಆರ್ಎಲ್ಡಿಯಿಂದ ಹಿಂದೆ ಸರಿದರು. ಇದರಿಂದಾಗಿ 2014 ಮತ್ತು 2019ರ ಚುನಾವಣೆಯಲ್ಲಿ ಆರ್ಎಲ್ಡಿ ಒಂದೇ ಒಂದು ಲೋಕಸಭಾ ಸ್ಥಾನವನ್ನು ಗೆಲ್ಲಲಿಲ್ಲ.
ಈ ಬಿರುಕಿಗೆ ಮೈತ್ರಿ ಮೂಲಕ ಮುಲಾಮು ಹಚ್ಚಲು ಮುಂದಾಗಿರುವ ಎಸ್ಪಿ, ಆರ್ ಎಲ್ ಡಿ ಗೆ 33 ಸ್ಥಾನಗಳನ್ನು ನೀಡದೆ. ಇಲ್ಲಿ ಜಾಟ್-ಮುಸ್ಲಿಂ-ರೈತರು ಒಗ್ಗೂಡಿಸಿದರೆ ಕನಿಷ್ಠ 50 ಸ್ಥಾನಗಳನ್ನು ಗೆಲ್ಲಬಹುದು ಎಂಬ ನಿರೀಕ್ಷೆ ಎಸ್ ಪಿಯದ್ದಾಗಿದೆ. ಇನ್ನು 33 ಸ್ಥಾನಗಳ ಈ ಪೈಕಿ ಆರ್ಎಲ್ಡಿ 5 ಸ್ಥಾನಗಳನ್ನು ಮುಸ್ಲಿಮರಿಗೆ ನೀಡಿದೆ. ಸಮಾಜವಾದಿ ಪಾರ್ಟಿ ಎಂಟು ಸ್ಥಾನಗಳಲ್ಲಿ ಮುಸ್ಲಿಮರನ್ನು ಕಣಕ್ಕಿಳಿಸಿದೆ.
ಜಾಟರ ಒಲವು ಯಾರ ಕಡೆ..?
ಪಶ್ಚಿಮ ಯುಪಿಯಲ್ಲಿ ಪಕ್ಷಗಳ ಗೆಲುವಿನ ಪಾತ್ರ ನಿರ್ಣಾಯಕವಾಗಿದೆ. ಕಳೆದ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯಲ್ಲಿ ಜಾಟ್ ರ ಬೆಂಬಲದೊಂದಿಗೆ ಬಿಜೆಪಿ ಭರ್ಜರಿ ಗೆಲುವು ಸಾಧಿಸಿತ್ತು. ಆದರೆ, ರೈತ ಚಳವಳಿಯ ಹಿನ್ನೆಲೆಯಲ್ಲಿ ಜಾಟ್ ರು ಬಿಜೆಪಿಯನ್ನು ವಿರೋಧಿಸುತ್ತಿದ್ದಾರೆ. ಅದು ಎಸ್ಪಿ-ಆರ್ಎಲ್ಡಿ ಮೈತ್ರಿಗೆ ಲಾಭವಾಗುವ ಸಾಧ್ಯತೆಗಳಿವೆ. ಇತ್ತ ಬಿಜೆಪಿ ಸಮಾಜವಾದಿ ಪಾರ್ಟಿ ಅಧಿಕಾರಕ್ಕೆ ಬಂದ್ರೆ ಜಯಂತ್ ಸಿಂಗ್ ರಬ್ಬರ್ ಸ್ಟಾಂಪ್ ಆಗುತ್ತಾರೆ ಎಂದು ಪ್ರಚಾರ ಮಾಡುತ್ತಾ, ಚಾಟ್ ರ ಮತಗಳಿಸಲು ಮುಂದಾಗಿದೆ.
ಎಸ್ ಪಿಗೆ ಬಿಎಸ್ ಪಿ ಟಕ್ಕರ್
ಮುಸ್ಲಿಂ ಮತಗಳು ನಿರ್ಣಾಯಕವಾಗಿರುವ ಮುಜಾಫರ್ನಗರ ವಿಭಾಗದಲ್ಲಿ ಸಮಾಜವಾದಿ ಪಾರ್ಟಿ, ಒಬ್ಬನೇ ಒಬ್ಬ ಮುಸಲ್ಮಾನನನ್ನು ಕಣಕ್ಕಿಳಿಸಲಿಲ್ಲ. ಮುಸ್ಲಿಂ ಮತಗಳು ಹೇಗಿದ್ದೂ ನಮಗೆ ಬರುತ್ತವೆ ಎಂಬ ನಿರೀಕ್ಷೆಯೊಂದಿಗೆ ಹಿಂದೂ ಮತಗಳನ್ನು ಒಡೆಯಲು ಎಸ್ ಪಿ ಈ ಪ್ಲಾನ್ ಮಾಡಿಕೊಂಡಿದೆ. ಇದು ಟಿಕೆಟ್ ನಿರೀಕ್ಷೆಯಲ್ಲಿದ್ದ ಮುಸ್ಲಿಂ ಮುಖಂಡರ ಅಸಮಾಧಾನಕ್ಕೆ ಕಾರಣವಾಗಿದೆ. ಮತ್ತೊಂದೆಡೆ, ಮಾಯಾವತಿ ಅವರು 17 ಮುಸ್ಲಿಮರನ್ನು ಅಖಾಡಕ್ಕೆ ಇಳಿಸಿದ್ದಾರೆ.
ಮುಸ್ಲಿಮರಿಗಿಲ್ಲ ಟಿಕೆಟ್..
ಪಶ್ಚಿಮ ಯುಪಿಯಲ್ಲಿ ಶೇ.26 ಮುಸ್ಲಿಮರಿದ್ದರೂ ಬಿಜೆಪಿ ಒಬ್ಬನೇ ಒಬ್ಬ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ. ಕಳೆದ ಚುನಾವಣೆಯಲ್ಲಿ ಇದೇ ತಂತ್ರವನ್ನು ಪ್ರಯೋಗಿಸಿದ್ದ ಬಿಜೆಪಿ 76 ಸ್ಥಾನಗಳಲ್ಲಿ 66 ಸ್ಥಾನಗಳನ್ನು ಗೆದ್ದಿತ್ತು. ಕೇವಲ ತನ್ನ ಹಿಂದುತ್ವದ ಶಕ್ತಿ ಮತ್ತು ಕಲ್ಯಾಣ ಕಾರ್ಯಕ್ರಮಗಳನ್ನೇ ನೆಚ್ಚಿಕೊಂಡಿರುವ ಬಿಜೆಪಿ ಈಗ ಜಾಟ್ ರನ್ನು ಸೆಳೆಯಲು ಪ್ಲಾನ್ ಮಾಡಿಕೊಳ್ಳುತ್ತಿದೆ. ಕಳೆದ ವರ್ಷ ಸೆಪ್ಟೆಂಬರ್ನಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಜಾಟ್ ರಾಜ ರಾಜ ಮಹೇಂದ್ರ ಪ್ರತಾಪ್ ಸಿಂಗ್ ಅವರ ಸ್ಮರಣಾರ್ಥ ವಿಶ್ವವಿದ್ಯಾನಿಲಯಕ್ಕೆ ಅಡಿಪಾಯ ಹಾಕಿದ್ರು. ಆ ಮೂಲಕ ಜಾಟ್ ಮತಗಳ ಸೆಳೆಯಲು ಕೇಸರಿ ಪಡೆ ಪ್ಲಾನ್ ಮಾಡಿದೆ.
ಇದಲ್ಲದೆ ಪಶ್ಚಿಮ ದೆಹಲಿ ಸಂಸದ ಪರ್ವೇಜ್ ಸಿಂಗ್ ವರ್ಮಾ ಅವರ ಮನೆಯಲ್ಲಿ ಪಶ್ಚಿಮ ಯುಪಿಯ 200 ಜಾಟ್ ನಾಯಕರೊಂದಿಗೆ ನಡೆದ ಸಭೆಯಲ್ಲಿ ಅಮಿತ್ ಶಾ ಭಾಗಿಯಾಗಿದ್ದರು. ಅವರು ಆರ್ಎಲ್ಡಿ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿ ಚುನಾವಣೆಯ ನಂತರ ರಾಜಿ ಮಾಡಿಕೊಳ್ಳಲು ಸಿದ್ಧ ಎಂದಿದ್ದಾರಂತೆ.
ಇನ್ನು ಪ್ಲಾನ್-ಬಿ ಅಡಿಯಲ್ಲಿ, ಬಿಜೆಪಿ ಪಶ್ಚಿಮ ಯುಪಿಯಲ್ಲಿ ಪ್ರಬಲವಾಗಿರುವ ಶೈನಿ, ಪಾಲ್, ಕಶ್ಯಪ್ ಮತ್ತು ಪ್ರಜಾಪತಿಗಳ ಮತಗಳನ್ನು ಅಭಿವೃದ್ಧಿಯ ಮಂತ್ರದೊಂದಿಗೆ ತನ್ನತ್ತ ಸೆಳೆದುಕೊಳ್ಳಲು ಪ್ರಯತ್ನಿಸುತ್ತಿದೆ.