ಯುಪಿ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

1 min read
Priyanka Gandhi

ಯುಪಿ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

ಫೆಬ್ರವರಿ 10 ರಂದು ಆರಂಭವಾಗಲಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷವು ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಗುರುವಾರ ಬಿಡುಗಡೆ ಮಾಡಿದೆ. ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಮಹಿಳೆಯರಿಗೆ ಗಣನೀಯ ಪ್ರಾತಿನಿಧ್ಯವನ್ನು ನೀಡಲಿದೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ.

ಒಟ್ಟು 125 ಅಭ್ಯರ್ಥಿಗಳ ಪೈಕಿ ಶೇ.40ರಷ್ಟು ಮಹಿಳೆಯರು ಮತ್ತು ಶೇ.40ರಷ್ಟು ಯುವಕರಿದ್ದಾರೆ. ಈ ಐತಿಹಾಸಿಕ ನಡೆಯಿಂದ ರಾಜ್ಯದಲ್ಲಿ ಹೊಸ ರೀತಿಯ ರಾಜಕೀಯ ಅಲೆ ತರಲು ನಾವು ಆಶಿಸುತ್ತೇವೆ ಎಂದು,  ವರ್ಚುವಲ್ ಸಭೆಯಲ್ಲಿ ಹೇಳಿದ್ದಾರೆ.

ಉನ್ನಾವೋ ಅತ್ಯಾಚಾರ ಸಂತ್ರಸ್ತೆಯ ತಾಯಿ ಸೇರಿದಂತೆ 50 ಮಹಿಳಾ ಅಭ್ಯರ್ಥಿಗಳು ಪಟ್ಟಿಯಲ್ಲಿದ್ದಾರೆ ಎಂದು ವಾದ್ರಾ ಹೇಳಿದ್ದಾರೆ. ಗೌರವಧನ ಹೆಚ್ಚಳಕ್ಕಾಗಿ ಆಂದೋಲನದ ನೇತೃತ್ವ ವಹಿಸಿದ್ದ ಆಶಾ ಕಾರ್ಯಕರ್ತೆ ಪೂನಂ ಪಾಂಡೆಯನ್ನು ಶಹಜಹಾನ್‌ಪುರದಿಂದ ಕಣಕ್ಕಿಳಿಸಿದ್ದೇವೆ ಎಂದು ತಿಳಿಸಿದ್ದಾರೆ.

ಕಳೆದ ಕೆಲವು ತಿಂಗಳುಗಳಲ್ಲಿ, ಪ್ರಿಯಾಂಕಾ ಗಾಂಧಿ ವಾದ್ರಾ ಅವರು 12 ನೇ ತರಗತಿ ತೇರ್ಗಡೆಯಾದ ಹುಡುಗಿಯರಿಗೆ ಸ್ಮಾರ್ಟ್‌ಫೋನ್‌ಗಳು, ಪದವಿ ಪಡೆದ ಮಹಿಳೆಯರಿಗೆ ಎಲೆಕ್ಟ್ರಿಕ್ ಸ್ಕೂಟರ್‌ಗಳು ಮತ್ತು ಮಹಿಳೆಯರಿಗಾಗಿ ಕೌಶಲ್ಯ ಅಭಿವೃದ್ಧಿ ಶಾಲೆಗಳು ಸೇರಿದಂತೆ ಹಲವಾರು ಮಹಿಳಾ ಕೇಂದ್ರಿತ ಭರವಸೆಗಳನ್ನು ಘೋಷಿಸಿದ್ದರು.

ಸುಮಾರು ಮೂರು ದಶಕಗಳಿಂದ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷವು ಅಧಿಕಾರದಿಂದ ಹೊರಗುಳಿದಿದೆ. ಪ್ರಿಯಾಂಕ ವಾದ್ರಾ ಮತ್ತೆ  ಬದಲಾವಣೆ ತರಲು ತೀವ್ರವಾಗಿ ಪ್ರಯತ್ನಿಸುತ್ತಿದ್ದಾರೆ.

ಉತ್ತರ ಪ್ರದೇಶದ 403 ವಿಧಾನಸಭಾ ಕ್ಷೇತ್ರಗಳಿಗೆ ಏಳು ಹಂತಗಳಲ್ಲಿ – ಫೆಬ್ರವರಿ 10, 14, 20, 23, 27 ಮತ್ತು ಮಾರ್ಚ್ 3 ಮತ್ತು 7 ರಂದು ಚುನಾವಣೆ ನಡೆಯಲಿದೆ. ಮತಗಳ ಎಣಿಕೆ ಮಾರ್ಚ್ 10 ರಂದು ನಡೆಯಲಿದೆ.

ಹಿಂದೆ, 2017 ಯುಪಿ ಚುನಾವಣೆಯಲ್ಲಿ, ಬಿಜೆಪಿ 312 ಸ್ಥಾನಗಳನ್ನು ಗಳಿಸಿದರೆ, ಎಸ್‌ಪಿ 47 ಸ್ಥಾನಗಳನ್ನು, ಬಿಎಸ್‌ಪಿ 19 ಮತ್ತು ಕಾಂಗ್ರೆಸ್ ಏಳು ಸ್ಥಾನಗಳನ್ನು ಮಾತ್ರ ಗೆಲ್ಲಲು ಸಾಧ್ಯವಾಯಿತು. ಉಳಿದ ಸ್ಥಾನಗಳನ್ನು ಇತರೆ ಅಭ್ಯರ್ಥಿಗಳು ತಮ್ಮದಾಗಿಸಿಕೊಂಡಿದ್ದರು.  2017ರ ಚುನಾವಣೆಯಲ್ಲಿ ಎಸ್‌ಪಿ ಜತೆ ಮೈತ್ರಿ ಮಾಡಿಕೊಂಡು ಕಾಂಗ್ರೆಸ್‌ ಸ್ಪರ್ಧಿಸಿತ್ತು.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd