ಭಾರತ – ಸಿಂಗಾಪುರ ಯುಪಿಐ – ಪೇ ನೌ ಡಿಜಿಟಲ್ ಪಾವತಿ ವ್ಯವಸ್ಥೆಗೆ ಚಾಲನೆ…
ಭಾರತ ಮತ್ತು ಸಿಂಗಾಪುರ ನಡುವೆ ಯುಪಿಐ – ಪೇ ನೌ ಮೂಲಕ ಗಡಿಯಾಚೆಗಿನ ಡಿಜಿಟಲ್ ಪಾವತಿ ವ್ಯವಸ್ಥೆಗೆ ಚಾಲನೆ ನೀಡಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಹಾಗೂ ಸಿಂಗಾಪುರ ಪ್ರಧಾನಿ ಲಿ ಸಿಯಾನ್ ಲೂನ್ ಅವರ ಸಮಕ್ಷಮದಲ್ಲಿ, ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಹಾಗೂ ಸಿಂಗಾಪುರದ ಹಣಕಾಸು ಪ್ರಾಧಿಕಾರದ ವ್ಯವಸ್ಥಾಪಕ ನಿರ್ದೇಶಕ ರವಿ ಮೆನನ್ ಈ ಕಾರ್ಯಕ್ಕೆ ಚಾಲನೆ ನೀಡಿದರು.
ವರ್ಚುವಲ್ ವೇದಿಕೆಯ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ತಂತ್ರಜ್ಞಾನ, ದೇಶ ದೇಶಗಳನ್ನು, ಜನರನ್ನು ಬೆಸೆಯುವ ಕೆಲಸ ಮಾಡುತ್ತಿದೆ. ಭಾರತ ಮತ್ತು ಸಿಂಗಾಪುರದ ನಡುವೆ ಆರಂಭವಾಗಿರುವ ಡಿಜಿಟಲ್ ಪಾವತಿ ವ್ಯವಸ್ಥೆಯಿಂದ ಪ್ರವಾಸಿಗರು, ವಿದ್ಯಾರ್ಥಿಗಳು ಹಾಗೂ ವೃತ್ತಿಪರರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಹೇಳಿದರು.
ಭಾರತ ನೈಜ ಸಮಯಾಧಾರಿತ ಡಿಜಿಟಲ್ ಪಾವತಿ ವ್ಯವಸ್ಥೆಯಲ್ಲಿ ವಿಶ್ವದ ಪ್ರಮುಖ ದೇಶವಾಗಿದೆ. ಭಾರತದ ಯುಪಿಐ ಪಾವತಿ ವ್ಯವಸ್ಥೆ ಗ್ರಾಹಕರು ಹಾಗೂ ವ್ಯಾಪಾರಸ್ಥರಿಗೆ ಹೊಸ ಅವಕಾಶ ಕಲ್ಪಿಸಿದೆ. ಭಾರತದ ಡಿಜಿಟಲ್ ಪಾವತಿ ಸದ್ಯದಲ್ಲೇ ನಗದು ವಹಿವಾಟನ್ನು ಮೀರಿಸಲಿದೆ ಎಂದು ಅಂದಾಜಿಸಲಾಗಿದೆ. ಯುಪಿಐ ಮೂಲಕ 2022ನೇ ಸಾಲಿನಲ್ಲಿ 126 ಲಕ್ಷ ಕೋಟಿ ರೂಪಾಯಿ ಮೌಲ್ಯದ ವಹಿವಾಟು ನಡೆಸಲಾಗಿದೆ. ಒಟ್ಟಾರೆ 7 ಸಾವಿರದ 400 ಕೋಟಿ ಸಂಖ್ಯೆಯ ವಹಿವಾಟುಗಳು ನಡೆದಿವೆ ಎಂದು ತಿಳಿಸಿದರು.
ಸಿಂಗಾಪುರ, ಭಾರತದ ಡಿಜಿಟಲ್ ಪಾವತಿ ವ್ಯವಸ್ಥೆಯೊಂದಿಗೆ ಕೈ ಜೋಡಿಸಿರುವ ಮೊದಲ ದೇಶವಾಗಿದೆ ಎಂದು ಹೇಳಿದರು.
UPI payment: India – Singapore launches UPI – Pay Now digital payment system…