ಶಿವಮೊಗ್ಗ: ಮದ್ಯ (Alcohol) ಸೇವಿಸುವ ವಿಚಾರಕ್ಕೆ ಬಾರ್ (Bar) ನಲ್ಲಿ ಗಲಾಟೆ ನಡೆದು, ಕ್ಯಾಶಿಯರ್ ಕೊಲೆಯಾಗಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಚಿನ್ (27) ಕೊಲೆಯಾದ ಯುವಕ. ಕೊಲೆಯಾದ ಯುವಕ ಬಾರ್ ಕ್ಯಾಶಿಯರ್ ಆಗಿ ಕೆಲಸ ಮಾಡುತ್ತಿದ್ದ. ಶಿವಮೊಗ್ಗ (Shivamogga) ತಾಲೂಕಿನ ಆಯನೂರಿನ ನವರತ್ನ ಬಾರ್ ನಲ್ಲಿಯೇ ಈ ಘಟನೆ ನಡೆದಿದೆ. ನಿರಂಜನ, ಸತೀಶ್ ಹಾಗೂ ಅಶೋಕ್ ನಾಯ್ಕ್ ಕೊಲೆ ಮಾಡಿರುವ ಆರೋಪಿಗಳು ಎನ್ನಲಾಗಿದೆ.
ಕೊಲೆ ಮಾಡಿರುವ ಆರೋಪಿಗಳು ಹಿಂದೆ ಹಣ ನೀಡದೆ ಮದ್ಯ ಖರೀದಿಸಿದ್ದರು ಎನ್ನಲಾಗಿದೆ. ಹೀಗಾಗಿ ಬಾರ್ ಬಳಿ ಬಂದಾಗ ಕ್ಯಾಶಿಯರ್ (Bar Cashier) ಹಣ ಕೇಳಿದ್ದಾರೆ. ಆಗ ಎಲ್ಲರ ಎದುರು ಹಣ ಕೇಳುತ್ತೀಯಾ ಎಂದು ಮೂವರು ಗಲಾಟೆ ಮಾಡಿದ್ದಾರೆ. ನಂತರ ಮತ್ತೆ ಅಲ್ಲಿಯೇ ಕುಡಿಯಲು ಆರಂಭಿಸಿದ್ದಾರೆ. 11.30 ಆದರೂ ಕುಡಿಯುವುದು ಮುಗಿಸಿಲ್ಲ. ಹೀಗಾಗಿ ಕ್ಯಾಶಿಯರ್ ಸಚಿನ್ ಬಂದು ಟೈಮ್ ಆಯಿತು ಹೊರಡಿ ಎಂದು ಹೇಳಿದ್ದಾರೆ. ಈ ಸಂದರ್ಭದಲ್ಲಿ ಅಮಲಿನಲ್ಲಿ ಮತ್ತೆ ಜಗಳ ಆರಂಭಿಸಿದ್ದಾರೆ.
ಆಗ ಜಗಳ ವಿಕೋಪಕ್ಕೆ ತೆರಳಿ ಸಚಿನ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಕೂಡಲೇ ಗಾಯಾಳುವನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗೆಂದು ಬೇರೆಡೆ ಶಿಫ್ಟ್ ಮಾಡುವಾಗಲೇ ಸಚಿನ್ ಸಾವನ್ನಪ್ಪಿದ್ದಾರೆ. ಘಟನೆ ಕುರಿತು ಕುಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.