ಸತತ ಪರಿಶ್ರಮದ ಮೂಲಕ ಗುರಿ ಮುಟ್ಟಿದ ದೃಢ ಸಂಕಲ್ಪದ ಯಲ್ಲಾಪುರದ ಹುಡುಗನ ಯುಪಿಎಸ್ ಸಿ ಜೈತ್ರಯಾತ್ರೆ:
ಇವರ ಹೆಸರು ವೆಂಕಟ್ರಮಣ ಕವಡಿಕೇರಿ. ಯುಪಿಎಸ್ ಸಿ ಫಲಿತಾಂಶ ದಲ್ಲಿ ಇವರಿಗೆ ಭಾರತದ 363ನೇ ರ್ಯಾಂಕ್ ದೊರಕಿದೆ. ಈ ಮೂಲಕ ಇವರು ಕರ್ನಾಟಕದಿಂದ ಆಯ್ಕೆಯಾದ ಪ್ರತಿಷ್ಠಿತ ಅಧಿಕಾರಿಗಳ ಸಾಲಿಗೆ ಸೇರಿದ್ದಾರೆ. ಈ ಪಯಣದ ಹಿಂದಿನ ಕತೆ ಸ್ಫೂರ್ತಿದಾಯಕವಾದದ್ದು. ಇವರು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದವರು. ಇದು ಇವರ 5ನೇ ಪ್ರಯತ್ನ. ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಒಟ್ಟೂ ಲಭ್ಯವಿರುವುದು 6 ಯತ್ನಗಳು ಮಾತ್ರ. ಈ ಮೊದಲು ಇವರು 3 ಬಾರಿ ಇಂಟರ್ವ್ಯೂ ಹಂತದ ತನಕ ತಲುಪಿದ್ದರು, ಇದು ನಾಲ್ಕನೇ ಬಾರಿ! ಗಮನಿಸಿ, ಯುಪಿಎಸ್ ಸಿ ಪರೀಕ್ಷೆ ಈಗಂತೂ ಅಸಾಧ್ಯವಾದ ಪೈಪೋಟಿ ಹಾಗೂ ಅನಿರೀಕ್ಷತೆ ಯನ್ನು ಹೊಂದಿದೆ. ಇದರಲ್ಲಿ ಈಜಿ ಜಯಿಸುವುದು ಖಂಡಿತ ಸುಲಭವಲ್ಲ.
ನನಗೆ ವೆಂಕಟ್ರಮಣ ಬಿಎಂಎಸ್ ಇಂಜಿನಿರಿಂಗ್ ದಿನದಿಂದ ಒಳ್ಳೆಯ ಪರಿಚಯ, ಆತ ನನಗೆ ಒಂದು ವರ್ಷ ಸೀನಿಯರ್. ಆಗ ಕನ್ನಡ ಸಂಘದಲ್ಲಿ ಒಡನಾಟ ಚೆನ್ನಾಗಿತ್ತು. ವೆಂಕಟ್ರಮಣ ಕನ್ನಡ ರಸಪ್ರಶ್ನೆ ಕಾರ್ಯಕ್ರಮವನ್ನು ಅದ್ಭುತ ವಾಗಿ ನಡೆಸಿಕೊಡುತ್ತಿದ್ದ. ಅವನು ತೆರಳಿದ ಮೇಲೆ, ನಾನೂ ಅವನ ಮಾದರಿಯನ್ನೇ ಮುಂದುವರಿಸಿದೆ. ಆಗಲೂ ಅವನಿಗೆ ಯುಪಿಎಸ್ ಸಿ ಪರೀಕ್ಷೆ ಯನ್ನು ಬರೆದು ಐ ಎ ಎಸ್ ಅಧಿಕಾರಿ ಆಗಬೇಕೆನ್ನುವ ಆಕಾಂಕ್ಷೆ ಬಲವಾಗಿತ್ತು. ತನ್ನ ಇಂಜಿನಿಯರಿಂಗ್ ಅಭ್ಯಾಸ ದೊಂದಿಗೆ ಆಗಲೇ ಆತ ಪ್ರತಿನಿತ್ಯ ದಿನಪತ್ರಿಕೆಗಳನ್ನ, ಮ್ಯಾಗಜೀನ್ ಗ ಳನ್ನು ಕೂಲಂಕಷವಾಗಿ ಅಧ್ಯಯನ ಮಾಡುತ್ತಿದ್ದ. ಸ್ವಲ್ಪ ಸಮಯ ಸಿಕ್ಕರೆ ಸಾಕು, ಎಲ್ಲ ಪತ್ರಿಕೆಗಳನ್ನು ಟೇಬಲ್ ನ ಮೇಲೆ ಹರಡಿಕೊಂಡು ಅಧ್ಯಯನದಲ್ಲಿ ಮಗ್ನನಾಗುತ್ತಿದ್ದ. ದಿನಪತ್ರಿಕೆ ಗಳನ್ನ ಹೇಗೆ ಓದಬೇಕು, ಅದರಲ್ಲಿರುವ ಕ್ರಿಟಿಕಲ್ ಅಂಶಗಳನ್ನು ಹೇಗೆ ಗುರುತಿಸಬೇಕು ಎಂದು ಹಲವು ಸಲ ನನಗೆ ತೋರಿಸಿ ಕೊಟ್ಟಿದ್ದ. ಆಗ ನನಗೂ ಕೆಲಕಾಲ ಯುಪಿಎಸ್ ಸಿ ಪರೀಕ್ಷೆಯನ್ನು ಬರೆದು ಉನ್ನತ ಅಧಿಕಾರಿ ಆಗಬೇಕೆನ್ನುವ ಬಯಕೆ ಹುಟ್ಟಿತ್ತು, ಕೆಲ ತಿಂಗಳು ಅದೇ ಗುಂಗಿನಲ್ಲಿದ್ದೆ ಕೂಡ.
ಬಿಎಂಎಸ್ ಕಾಲೇಜು ಕರ್ನಾಟಕದ ಪ್ರಸಿದ್ಧ ಕಾಲೇಜುಗಳಲ್ಲಿ ಒಂದು. ವೆಂಕಟ್ರಮಣನಿಗೆ ಇಂಜಿನಿಯರಿಂಗ್ ಮುಗಿಯುತ್ತಿದ್ದಂತೆ ಖಾಸಗಿ ಕಂಪೆನಿಯೊಂದರಲ್ಲಿ ಲಕ್ಷ ಲಕ್ಷ ಸಂಬಳ ಸಿಗುವ ಕೆಲಸ ಸಿಕ್ಕಿತು. ಕೆಲ ತಿಂಗಳು ಅಲ್ಲಿದ್ದು ನಂತರ ಪ್ರೊಬೇಷನರಿ ಆಫೀಸರ್ ಆಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿಯೂ ಕೆಲಸ ನಿರ್ವಹಿಸಿದ. ಆದರೂ ಅವನ ಗುರಿ ಯುಪಿಎಸ್ ಸಿ ಯತ್ತಲೇ ನೆಟ್ಟಿತ್ತು. ಹಾಗಾಗಿ 2015ರಲ್ಲಿ ಈತ ಈ ಕೆಲಸವನ್ನು ಬಿಟ್ಟು ಯುಪಿಎಸ್ ಸಿ ಪರೀಕ್ಷೆಯ ಅಧ್ಯಯನಕ್ಕೆ ಜಾರಿದ. ಇದಾದ ನಂತರ ಅವನ ಸಂಪರ್ಕವೂ ನನಗೆ ತಪ್ಪಿ ಹೋಯ್ತು.
ಈ ಪರೀಕ್ಷೆಗಳನ್ನು ಬರೆಯುವವರು ಎಲ್ಲ ತರಹದ ಮನೋಕಾಮನೆಗಳಿಂದ, ವಾಂಛೆ ಮೋಹಗಳಿಂದ ಮುಕ್ತರಾಗುವುದು ಅನಿವಾರ್ಯ. ಆದರೂ ಸ್ನೇಹಿತ ವಿನಯ್ ಚಿಂಚೋಳಿಯ ಮೂಲಕ ಅವನ ವಿಷಯ ಆಗಾಗ ತಿಳಿಯುತ್ತಿತ್ತು. ಯುಪಿಎಸ್ ಸಿ ಫಲಿತಾಂಶ ಹೊರಬಂದಿದೆ ಎಂದಕೂಡಲೇ ನಾನು ಗೂಗಲ್ ಸರ್ಚ್ ಮಾಡಿದ್ದೇ ಮಾಡಿದ್ದು, ಕರ್ನಾಟಕದಿಂದ ಯಾರು ಆಯ್ಕೆಯಾಗಿದ್ದಾರೆ ಎಂದು ತಿಳಿಯುವ ಕುತೂಹಲ ನನ್ನದು, ಅಷ್ಟರಲ್ಲಿ ಈ ಸಿಹಿಸುದ್ದಿ ಯನ್ನು ವಿನಯ್ ತಿಳಿಸಿದ. ಕೂಡಲೇ ವೆಂಕಟ್ರಮಣನಿಗೆ ಫೋನ್ ಮಾಡಿ ಶುಭಾಶಯ ಕೋರಿದೆ. ಜೊತೆಗೆ, ಆತನ ಈ ಸಾಧನೆಯ ಹಿಂದಿನ ಪಯಣವನ್ನು ಅವನ ಬಾಯಿಂದಲೇ ಕೇಳುವ ಆಸೆಯಿತ್ತು.
ವೆಂಕಟ್ರಮಣ ಐಚ್ಚಿಕ ವಿಷಯವನ್ನಾಗಿ ಆಯ್ಕೆ ಮಾಡಿಕೊಂಡಿದ್ದು ಕನ್ನಡ ಸಾಹಿತ್ಯವನ್ನು. ಮೊದಲ ನಾಲ್ಕು ಪ್ರಯತ್ನಗಳಲ್ಲಿ ಪ್ರಿಲಿಮಿನರಿ ಹಾಗೂ ಮೇನ್ ಹಂತಗಳನ್ನು ಈತ ಪೂರ್ತಿ ಕನ್ನಡದಲ್ಲೇ ಬರೆದದ್ದು ಬಹಳ ಸಂತಸದ ವಿಚಾರ. ಆದರೂ ಅದೇ ಕಾರಣದಿಂದಲೇ ತನಗೆ ಸ್ವಲ್ಪ ಕಡಿಮೆ ಅಂಕ ಸಿಕ್ಕಿರಬಹುದು ಎಂದು ಅವನು ಇಂದು ಹೇಳಿದಾಗ ನನಗೆ ಕೊಂಚ ಬೇಸರವಾಯಿತು. ಅದೇನೇ ಇರಲಿ, ಈ ಸಲ ಜನರಲ್ ಸ್ಟಡೀಸ್ ನಂತಹ ವಿಷಯಗಳನ್ನು ವೆಂಕಟ್ರಮಣ ಇಂಗ್ಲಿಷ್ ನಲ್ಲಿ ಬರೆದನಂತೆ ( ಕನ್ನಡ ಸಾಹಿತ್ಯವನ್ನು ಕನ್ನಡದಲ್ಲೇ ಬರೆಯಬೇಕು). ಅಂತೂ ಈತನ ಛಲ ಬಿಡದ ಹೋರಾಟಕ್ಕೆ ಜಯ ದೊರಕಿದೆ. ವೆಂಕಟ್ರಮಣ ಎಲ್ಲಿಯೂ, ಯಾವುದೇ ತರಹದ ಕೋಚಿಂಗ್ ನ್ನು ತೆಗೆದುಕೊಂಡಿಲ್ಲ. ಸ್ವತಃ ತಾನೇ ತನ್ನ ಅಧ್ಯಯನವನ್ನು ರೂಪಿಸಿಕೊಂಡಿದ್ದಾನೆ ಎನ್ನುವುದು ಗಮನಾರ್ಹವಾದ ಸಂಗತಿ.
ಇದು ಸುಲಭವಲ್ಲ. ಸಣ್ಣ ತರಗತಿಗಳಿಗೂ ಮಕ್ಕಳನ್ನು ಟ್ಯೂಷನ್ ಗೆ ಕಳಿಸುವ ಪೋಷಕರು ಈ ವಿಷಯವನ್ನು ಗಮನಿಸಬೇಕು. ಇಂತಹ ಪರೀಕ್ಷೆ ಗಳಲ್ಲಿ ಕ್ರಿಟಿಕಲ್ ಥಿಂಕಿಂಗ್ ಬಹಳ ಮುಖ್ಯ. ಯುಪಿಎಸ್ ಸಿ ಪರೀಕ್ಷೆಯಲ್ಲಿ ಇಂಟರ್ವ್ಯೂ ನಲ್ಲಿ ಫೇಲ್ ಆದರೆ ಮತ್ತೆ ಪ್ರಿಲಿಮ್ಸ್ ಹಂತದಿಂದ ಪರೀಕ್ಷೆ ಬರೆಯಬೇಕು! ಅದಕ್ಕೆ ಬಹಳ ಮನೋಬಲ ಬೇಕು. ಪ್ರತಿಸಲವೂ ಕೊನೆಯ ಹಂತದಲ್ಲಿ ಆಯ್ಕೆ ಆಗದಿದ್ದಾಗ ಇನ್ನು ಇದು ಸಾಕು, ಬಿಟ್ಟುಬಿಡೋಣ ಎಂದು ಅನ್ನಿಸುತ್ತಿರಲಿಲ್ಲವೇ ಎಂದು ನಾನು ಕೇಳಿದೆ. “ಇಲ್ಲಪ್ಪ, ಖಂಡಿತ ಇಲ್ಲ. You need to keep hitting on the target. you will know that you are almost there, you can reach it. You will be in the flow. You shouldn’t give up” ಎಂದು ಹೇಳಿದ. ಈ ಮಾತು ಕೇಳಲು ಸುಲಭ. ನಾಲ್ಕೈದು ವರ್ಷ ಹೊಡೆದಾಡಿ ಜಯಿಸಲು ಬಹಳ ಮನೋಬಲ ಬೇಕು.
ಇನ್ನು ವೆಂಕಟ್ರಮಣನಿಗೆ ಕನ್ನಡ ಸಾಹಿತ್ಯವನ್ನು ಹೆಚ್ಚೆಚ್ಚು ಜನರು ವಿಷಯವನ್ನಾಗಿ ಆಯ್ಕೆ ಮಾಡಿಕೊಳ್ಳಬೇಕು, ಕರ್ನಾಟಕದಿಂದ ಇನ್ನೂ ಹೆಚ್ಚಿನ ಜನರು ಆಯ್ಕೆಯಾಗಬೇಕು ಎನ್ನುವ ಬಯಕೆಯಿದೆ. ಇಲ್ಲಿ ಆಯ್ಕೆಯಾದವರು ಉನ್ನತ ಹುದ್ದೆಗಳನ್ನು ಅಲಂಕರಿಸುತ್ತಾರೆ, ಅವರಿಂದ ಬದಲಾವಣೆ ಸಾಧ್ಯ, ಆದರೆ ಕನ್ನಡಿಗರ ಸಂಖ್ಯೆ ಸಾಕಷ್ಟು ಕಡಿಮೆ, ಇದು ಬದಲಾಗಬೇಕು ಎಂದು ದೃಢವಾದ ಹಂಬಲವನ್ನು ವೆಂಕಟ್ರಮಣ ವ್ಯಕ್ತಪಡಿಸಿದ್ದಾನೆ.
ವೆಂಕಟ್ರಮಣ ತೀರಾ ಸಾಧಾರಣ ಹಿನ್ನೆಲೆಯಿಂದ ಬಂದವನು. ಪ್ರಾಥಮಿಕ ಶಿಕ್ಷಣವನ್ನು ಊರಿನಲ್ಲೇ ಮಾಡಿ, ನಂತರ ಮೆರಿಟ್ ಆಧಾರದ ಮೇಲೆ ಪ್ರಸಿದ್ಧ ಕಾಲೇಜ್ ನಲ್ಲಿ ಡಿಗ್ರಿ ಮುಗಿಸಿ, ಮತ್ತೆ ಎಲ್ಲಾರಂತಾಗದೆ, ಸಾಮಾಜಿಕ ಒತ್ತಡಗಳಿಗೆ ಮಣಿಯದೆ ತನ್ನದೇ ದಾರಿಯಲ್ಲಿ ನಡೆದವನು. ವೆಂಕಟ್ರಮಣರನ್ನು ಅಭಿನಂದಿಸುತ್ತ, ಇವರ ಮುಂದಿನ ಸಾಧನೆಗೆ ಶುಭ ಕೊರೋಣ.
-ಸಂದೀಪ್ ಹೆಗಡೆ
ಬೆಂಗಳೂರು