ಸಿರಿಯಾ- ಇರಾಕ್ ಗಡಿಯಲ್ಲಿ ಅಮೆರಿಕಾದಿಂದ ವೈಮಾನಿಕ ದಾಳಿ
ಸಿರಿಯಾ : ಸಿರಿಯಾ- ಇರಾಕ್ ಗಡಿಯಲ್ಲಿನ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡು ಅಮೆರಿಕಾ ವೈಮಾನಿಕ ದಾಳಿ ನಡೆಸಿದೆ.. ಈ ದಾಳಿಯಲ್ಲಿ 5 ಇರಾನ್ ಬೆಂಬಲಿತ ಇರಾಕಿ ಮಿಲಿಟಿಯಾ ಯೋಧರು ಮೃತಪಟ್ಟಿರೋದಾಗಿ ವರದಿಯಾಗಿದೆ.. ಪೂರ್ವ ಸಿರಿಯಾದಲ್ಲಿ ಅಮೆರಿಕವು ವೈಮಾನಿಕ ದಾಳಿ ನಡೆಸಿದೆ. ಘಟನೆಯಯಲ್ಲಿ ಹಲವರು ಗಾಯಗೊಂಡಿದ್ದಾರೆ ಎಂದು ಬ್ರಿಟನ್ ಮೂಲದ ಸಿರಿಯಾ ಮಾನವ ಹಕ್ಕು ವೀಕ್ಷಕರು ತಿಳಿಸಿದ್ದಾರೆ.
ಘಟನೆಯಲ್ಲಿ ಒಂದು ಮಗು ಕೊಲ್ಲಲ್ಪಟ್ಟಿದೆ ಮತ್ತು ಕನಿಷ್ಠ ಮೂರು ಜನರು ಗಾಯಗೊಂಡಿದ್ದಾರೆ ಎಂದು ಸಿರಿಯಾದ ಸರ್ಕಾರಿ ಸುದ್ದಿ ಸಂಸ್ಥೆ ಸನಾ ವರದಿ ಮಾಡಿದೆ. ಈ ಹಿಂದೆ ಫೆಬ್ರವರಿಯಲ್ಲಿ, ಪೂರ್ವ ಸಿರಿಯಾದಲ್ಲಿ ಇರಾನ್ ಬೆಂಬಲಿತ ಬಂಡುಕೋರ ಗುಂಪುಗಳ ನೆಲೆಗಳ ಮೇಲೆ ಅಮೆರಿಕ ನಡೆಸಿದ ದಾಳಿಯಲ್ಲಿ 20 ಕ್ಕೂ ಹೆಚ್ಚು ಬಂಡುಕೋರರು ಸಾವನ್ನಪ್ಪಿದ್ದರು.
ಅಧ್ಯಕ್ಷ ಜೋ ಬಿಡನ್ ಅಧಿಕಾರ ವಹಿಸಿಕೊಂಡ ನಂತರ ಸಿರಿಯಾದಲ್ಲಿ ಇರಾನ್ ಬೆಂಬಲಿತ ಸೇನಾಪಡೆಗಳ ಮೇಲೆ ಅಮೆರಿಕ ನಡೆಸಿದ 2ನೇ ದಾಳಿಯಾಗಿದೆ. ಇದನ್ನ ಪೆಂಟಗನ್ ತನ್ನ ಹೇಳಿಕೆಯಲ್ಲಿ ದೃಢಪಡಿಸಿದೆ. ಅಲ್ಲದೇ ಸಿರಿಯಾದ ಎರಡು ಸ್ಥಳಗಳಲ್ಲಿ ಮತ್ತು ಇರಾಕ್ ನಲ್ಲಿ ಒಂದು ಸ್ಥಳದಲ್ಲಿ ಶಸ್ತ್ರಾಸ್ತ್ರ ಸಂಗ್ರಹಣಾ ವ್ಯವಸ್ಥೆಯನ್ನು ಗುರಿಯಾಗಿಸಿಕೊಂಡು ದಾಳಿ ಮಾಡಲಾಗಿದೆ ಎಂದು ಪೆಂಟಗನ್ ಪ್ರಕಟಣೆಯಲ್ಲಿ ತಿಳಿಸಿದೆ.








