ಯುಎಸ್ ಓಪನ್ ಟೆನಿಸ್ – ಪುರುಷರ ಸಿಂಗಲ್ಸ್ – ನಾಲ್ಕನೇ ಸುತ್ತು ಪ್ರವೇಶಿಸಿದ ನೊವಾಕ್ ಜಾಕೊವಿಕ್
ಯುಎಸ್ ಓಪನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ನಲ್ಲಿ ನೊವಾಕ್ ಜಾಕೊವಿಕ್ ಅವರು ನಾಲ್ಕನೇ ಸುತ್ತು ಪ್ರವೇಶಿಸಿದ್ದಾರೆ. ಮೂರನೇ ಸುತ್ತಿನ ಪಂದ್ಯದಲ್ಲಿ ಅಗ್ರ ಶ್ರೇಯಾಂಕಿತ ನೊವಾಕ್ ಜಾಕೊವಿಕ್ ಅವರು 6-3, 6-3, 6-1 ನೇರ ಸೆಟ್ ಗಳಿಂದ ಜಾನ್ ಲೆನಾರ್ಡ್ ಸ್ಟ್ರಫ್ ಅವರನ್ನು ಪರಾಭವಗೊಳಿಸಿದ್ರು.
ಮೂರು ಬಾರಿ ಯುಎಸ್ ಓಪನ್ ಚಾಂಪಿಯನ್ ಆಗಿರುವ ನೊವಾಕ್ ಜಾಕೋವಿಕ್ ಅವರು ಮತ್ತೊಂದು ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿಯನ್ನು ಎದುರು ನೋಡುತ್ತಿದ್ದಾರೆ. ಈ ಬಾರಿಯ ಟೂರ್ನಿಯಲ್ಲಿ ಫೆಡರರ್ ಮತ್ತು ನಡಾಲ್ ಆಡುತ್ತಿಲ್ಲ. ಹೀಗಾಗಿ ಜಾಕೊವಿಕ್ ಪ್ರಶಸ್ತಿ ಗೆಲ್ಲುವ ನೆಚ್ಚಿನ ಆಟಗಾರರನಾಗಿದ್ದಾರೆ. ನಾಲ್ಕನೇ ಸುತ್ತಿನ ಪಂದ್ಯದಲ್ಲಿ 20ನೇ ಶ್ರೇಯಾಂಕಿತ ಪಾಬ್ಲೊ ಕಾರೆನೊ ಬುಸ್ಟಾ ಅವರನ್ನು ಎದುರಿಸಲಿದ್ದಾರೆ.
ಪುರುಷರ ಸಿಂಗಲ್ಸ್ ನ ಇನ್ನೊಂದು ಪಂದ್ಯದಲ್ಲಿ ಅಲೆಕ್ಸಾಂಡರ್ ಝಿವೆರೆವ್ ಅವರು 6-7, 6-4, 6-2, 6-2ರಿಂದ ಆಡ್ರಿಯನ್ ಮಾನಾರೊನೊ ಅವರನ್ನು ಸೋಲಿಸಿದ್ರು. ಹಾಗೇ ಡೆನಿಸ್ ಶಾಪೊವಾಲೊವ್ 3-6, 6-3, 4-6, 7-6, 6-2ರಿಂದ ಟೇಲರ್ ಫ್ರಿಟ್ಜ್ ಅವರನ್ನು ಮಣಿಸಿ ನಾಲ್ಕನೇ ಸುತ್ತು ಪ್ರವೇಶಿಸಿದ್ದಾರೆ.







