ಯುಎಸ್ ಓಪನ್ ಟೆನಿಸ್ 2020- ಡಾಮಿನಿಕ್ ಥೀಮ್‍ಗೆ ಚೊಚ್ಚಲ ಗ್ರ್ಯಾಂಡ್ ಸ್ಲ್ಯಾಮ್ ಕಿರೀಟ..!
ಆಸ್ಟ್ರೀಯದ ಡಾಮಿನಿಕ್ ಥೀಮ್ ಅವರು ಚೊಚ್ಚಲ ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ. 2020ರ ಯುಎಸ್ ಓಪನ್ ಟೆನಿಸ್ ಟೂರ್ನಿಯ ಫೈನಲ್ ನಲ್ಲಿ ಡಾಮಿನಿಕ್ ಥೀಮ್ ಅವರು ಅದ್ಭುತ ಆಟವನ್ನಾಡಿ ಅರ್ಹವಾಗಿಯೇ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
ಜಿದ್ದಾ ಜಿದ್ದಿನ ಫೈನಲ್ ಪಂದ್ಯದಲ್ಲಿ ಡಾಮಿನಿಕ್ ಥೀಮ್ ಅವರು ಜರ್ಮನಿಯ ಅಲೆಕ್ಸಾಂಡರ್ ಝಿವೆರೆವ್ ವಿರುದ್ಧ ಪ್ರಯಾಸದ ಜಯ ಸಾಧಿಸಿದ್ರು. ಮೊದಲ ಎರಡು ಸೆಟ್ ಗಳನ್ನು ಸೋತಿದ್ದ ಡಾಮಿನಿಕ್ ಥೀಮ್ ನಂತರದ ಎರಡು ಸೆಟ್‍ಗಳನ್ನು ಸುಲಭವಾಗಿ ಗೆದ್ದುಕೊಂಡ್ರು. ಆದ್ರೆ ಅಂತಿಮ ಸೆಟ್ ನಲ್ಲಿ ಅಲೆಕ್ಸಾಂಡರ್ ಅವರು ದಿಟ್ಟ ಹೋರಾಟವನ್ನು ನೀಡಿದ್ರು. ಆದ್ರೂ ಡಾಮಿನಿಕ್ ಅವರ ಅದ್ಭುತ ಆಟದಿಂದ ಅಲೆಕ್ಸಾಂಡರ್ ಅವರು ತಲೆಬಾಗಲೇಬೇಕಾಯ್ತು.
ಅಂತಿಮವಾಗಿ ಡಾಮಿನಿಕ್ ಥೀಮ್ ಅವರು 2-6, 4-6, 6-4, 6-3, 7-6ರಿಂದ ಜಯ ಗಳಿಸಿದ್ರು.
27ರ ಹರೆಯದ ಡಾಮಿನಿಕ್ ಥೀಮ್ ಅವರು ಟೂರ್ನಿಯ ಫೇವರೀಟ್ ಆಟಗಾರನಾಗಿದ್ರು. ವಿಶ್ವದ ಮೂರನೇ ಶ್ರೇಯಾಂಕವನ್ನು ಪಡೆದುಕೊಂಡಿರುವ ಥೀಮ್, ಈ ಹಿಂದೆ ಮೂರು ಬಾರಿ ಗ್ರ್ಯಾಂಡ್ ಸ್ಲ್ಯಾಂ ಟೂರ್ನಿಯ ಫೈನಲ್ ನಲ್ಲಿ ನಿರಾಸೆ ಅನುಭವಿಸಿದ್ದರು. ಆದ್ರೆ ಈ ಬಾರಿಯ ಯುಎಸ್ ಓಪನ್ ಟೂರ್ನಿಯಲ್ಲಿ ತನ್ನ ಬಹುದಿನಗಳ ಕನಸನ್ನು ನನಸು ಮಾಡಿಕೊಂಡ್ರು.
ಈ ಪ್ರಶಸ್ತಿಯ ಮೂಲಕ ಥೀಮ್ ಅವರು ಹೊಸ ದಾಖಲೆಯನ್ನು ಕೂಡ ಬರೆದಿದ್ದಾರೆ. ಆಸ್ಟ್ರೀಯ ಪರ ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿ ಗೆದ್ದ ಎರಡನೇ ಆಟಗಾರನಾಗಿ ಹೊರಹೊಮ್ಮಿದ್ರು. ಈ ಹಿಂದೆ 1995ರಲ್ಲಿ ಆಸ್ಟ್ರೀಯದ ಥಾಮಸ್ ಮಾಸ್ಟರ್ ಅವರು ಫ್ರೆಂಚ್ ಓಪನ್ ಪ್ರಶಸ್ತಿ ಗೆದ್ದುಕೊಂಡಿದ್ದರು. ಇದೀಗ ಆಸ್ಟ್ರೀಯಗೆ 25 ವರ್ಷಗಳ ಬಳಿಕ ಮತ್ತೊಂದು ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿ ಲಭಿಸಿದೆ.
https://youtu.be/BH8knlOnbKs?t=34
ಈ ಹಿಂದೆ ಡಾಮಿನಿಕ್ ಥೀಮ್ ಅವರು ಎರಡು ಬಾರಿ ಫ್ರೆಂಚ್ ಓಪನ್ ಟೂರ್ನಿಯ ಫೈನಲ್ ನಲ್ಲಿ ರಫೆಲ್ ನಡಾಲ್ ವಿರುದ್ಧ ಸೋಲು ಅನುಭವಿಸಿದ್ದರು. ಹಾಗೇ 2020ರ ಆಸ್ಟ್ರೇಲಿಯನ್ ಓಪನ್ ಟೂರ್ನಿಯ ಫೈನಲ್ ನಲ್ಲಿ ಥೀಮ್ ಅವರು ನೊವಾಕ್ ಜಾಕೊವಿಕ್ ವಿರುದ್ಧ ಸೋಲು ಅನುಭವಿಸಿದ್ದರು.








