ಯುಎಸ್ ಓಪನ್ ಟೆನಿಸ್ – ಮುಂದುವರಿದ ಸೆರೆನಾ ಆರ್ಭಟ… ಟೂರ್ನಿಯಿಂದ ಹೊರಬಿದ್ದ ಮುಗುರುಝಾ
2020ರ ಯುಎಸ್ ಓಪನ್ ಟೆನಿಸ್ ಟೂರ್ನಿಯ ಮಹಿಳಾ ಸಿಂಗಲ್ಸ್ ನಲ್ಲಿ ಸೆರೆನಾ ವಿಲಿಯಮ್ಸ್ ಅವರು ಮೂರನೇ ಸುತ್ತು ಪ್ರವೇಶಿಸಿದ್ದಾರೆ. ಟೂರ್ನಿಯ ನಾಲ್ಕನೇ ದಿನ ಸೆರೆನಾ ವಿಲಿಯಮ್ಸ್ ಎರಡನೇ ಸುತ್ತಿನ ಪಂದ್ಯದಲ್ಲಿ 6-2, 6-4ರಿಂದ ರಷ್ಯಾದ ಮಾರ್ಗರಿಟಾ ಗಾಸ್ಪಾರ್ಯಾನ್ ಅವರನ್ನು ಪರಾಭವಗೊಳಿಸಿದ್ರು.
ಪಂದ್ಯದ ಆರಂಭದಿಂದಲೇ ಆಕ್ರಮಣಕಾರಿಯಾಗಿ ಆಟವನ್ನಾಡಿದ್ದ ಸೆರೆನಾ ವಿಲಿಯಮ್ಸ್ ಅವರ ಆರ್ಭಟದ ಮುಂದೆ ಮಾರ್ಗರಿಟಾ ಅವರು ಪ್ರತಿರೋಧ ಒಡ್ಡಲು ವಿಫಲರಾದ್ರು. 24ನೇ ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಸೆರೆನಾ ವಿಲಿಯಮ್ಸ್ ಲಾಕ್ ಡೌನ್ ಟೈಮ್ ನಲ್ಲೂ ಅಭ್ಯಾಸದಲ್ಲಿ ನಿರತರಾಗಿದ್ದರು. 24ನೇ ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿ ಗೆಲ್ಲುವ ಮೂಲಕ ಆಲ್ ಟೈಮ್ ದಾಖಲೆಯನ್ನು ಸಮಗೊಳಿಸುವ ಇರಾದೆಯಲ್ಲಿದ್ದಾರೆ ಸೆರೆನಾ ವಿಲಿಯಮ್ಸ್.
ಇನ್ನೊಂದು ಮಹಿಳೆಯರ ಸಿಂಗಲ್ಸ್ ನಲ್ಲಿ ಸ್ಪೇನ್ ನ ಗಾರ್ಬಿನ್ ಮುಗುರುಝಾ ಅವರು ಆಘಾತ ಅನುಭವಿಸಿದ್ದಾರೆ. ಎರಡನೇ ಸುತ್ತಿನ ಪಂದ್ಯದಲ್ಲಿ 10ನೇ ಶ್ರೇಯಾಂಕಿತೆಯಾಗಿರುವ ಮುಗುರುಝಾ ಅವರು ಶ್ರೇಯಾಂಕಾ ರಹಿತ ಆಟಗಾರ್ತಿ ಬಲ್ಗೆರಿಯಾದ ಸ್ವೆಟಾನಾ ಪಿರೊಂಕೊವಾ ಅವರಿಗೆ ತಲೆಬಾಗಿದ್ರು. 2017ರ ನಂತರ ಸ್ವೆಟಾವಾ ಪಿರೋಂಕೊವಾ ಅವರು ಇದೇ ಮೊದಲ ಬಾರಿ ಗ್ರ್ಯಾಂಡ್ ಸ್ಲ್ಯಾಂ ಟೂರ್ನಿಯನ್ನು ಆಡುತ್ತಿದ್ದಾರೆ. ಎರಡು ಬಾರಿ ಗ್ರ್ಯಾಂಡ್ ಸ್ಲ್ಯಾಂ ಚಾಂಪಿಯನ್ ಆಗಿದ್ದ ಮುಗುರುಝಾ ಅವರು 5-7, 6-3ರಿಂದ ಸ್ವೆಟಾನಾ ವಿರುದ್ಧ ಸೋಲು ಅನುಭವಿಸಿದ್ರು.








