ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆ (USA Presidential Election) ಕಾವು ರಂಗೇರಿದ್ದು, ರಿಪಬ್ಲಿಕ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ (Donald Trump) ಮತ್ತು ಹಾಲಿ ಉಪಾಧ್ಯಕ್ಷೆ, ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್ (Kamala Harris) ಮುಖಾಮುಖಿಯಾಗಿದ್ದಾರೆ.
ಪೆನ್ಸಿಲ್ವೇನಿಯಾದಲ್ಲಿ ಎಬಿಸಿ ವಾಹಿನಿ ಆಯೋಜಿಸಿದ್ದ ಬಹಿರಂಗ ಚರ್ಚೆಯಲ್ಲಿ ಆರ್ಥಿಕತೆ, ವಲಸೆ ನೀತಿ, ಕ್ಯಾಪಿಟಲ್ ಹಿಲ್ ಗಲಭೆ ಸೇರಿದಂತೆ ಹಲವು ವಿಚಾರಗಳ ಕುರಿತು ಇಬ್ಬರು ನಾಯಕರು ಮಾತನಾಡಿದ್ದಾರೆ.
ಕಮಲಾ ಹ್ಯಾರಿಸ್ ಮಾರ್ಕ್ಸ್ ವಾದಿಯಾಗಿದ್ದಾರೆ. ಅವರ ತಂದೆ ಮಾರ್ಕ್ಸ್‌ವಾದ ಕಲಿಸಿಕೊಟ್ಟಿದ್ದಾರೆ. ಅವರ ಹುಚ್ಚು ನೀತಿಯಿಂದ ದೇಶ ನಾಶವಾಗಿದೆ ಎಂದು ಟ್ರಂಪ್ ಆರೋಪಿಸಿದರು. ಇದಕ್ಕೆ ತಿರುಗೇಟು ನೀಡಿದ ಹ್ಯಾರಿಸ್, ಡೊನಾಲ್ಡ್ ಟ್ರಂಪ್ ಲಕ್ಷಾಂತರ ಜನರನ್ನು ವಜಾಗೊಳಿಸಿದ್ದಾರೆ. ಕೆಟ್ಟ ಉದ್ಯೋಗ ನೀತಿಯಿಂದ ದೇಶವನ್ನು ಸಮಸ್ಯೆಗೆ ಸಿಲುಕಿಸಿದ್ದಾರೆ.
ಟ್ರಂಪ್ ಅವಧಿಯಲ್ಲಿ ಆಗಿದ್ದ ಅವ್ಯವಸ್ಥೆಯನ್ನು ನಮ್ಮ ಅವಧಿಯಲ್ಲಿ ನಾವು ಸ್ವಚ್ಛ ಮಾಡಿದ್ದೇವೆ ಎಂದು ಹೇಳಿದ್ದಾರೆ.ಕಮಲಾ ಹ್ಯಾರಿಸ್ ಅಧಿಕಾರಕ್ಕೆ ಬಂದರೆ ಅಮೆರಿಕ ವೆನೆಜುವೆಲಾ ಆಗಲಿದೆ. ನನ್ನ ಯೋಜನೆ ಉತ್ತಮ ಯೋಜನೆಯಾಗಿದೆ. ಕಮಲಾ ಬೈಡೆನ್ ಅವರ ಯೋಜನೆಯನ್ನು ನಕಲು ಮಾಡಿದ್ದಾರೆ.
ಸಾಕುಪ್ರಾಣಿಗಳನ್ನು ಸೇವಿಸುವ ಹೈಟಿ ವಲಸಿಗರು ಅಮೆರಿಕ ಜನರು ಸಾಕಿದ್ದ ನಾಯಿ, ಬೆಕ್ಕುಗಳನ್ನು ತಿನ್ನುತ್ತಿದ್ದಾರೆ. ಬೈಡನ್ ಅವಧಿಯಲ್ಲಿ ಲಕ್ಷಾಂತರ ಕ್ರಿಮಿನಲ್ ಗಳಿಗೆ ದೇಶಕ್ಕೆ ಬರಲು ಅವಕಾಶ ಸಿಕ್ಕಂತಾಗಿದೆ. ಭಯೋತ್ಪಾದಕರು, ಡ್ರಗ್ ಡೀಲರ್‌ಗಳಿಗೆ ಬರಲು ಅವಕಾಶ ನೀಡಿ ಅವರ ಮತಗಳನ್ನು ಪಡೆಯುತ್ತಿದ್ದಾರೆ ಎಂದು ಟ್ರಂಪ್ ಆರೋಪಿಸಿದರು.
ಟ್ರಂಪ್ ಪ್ರಚಾರ ಸಭೆಗೆ ಆಗಮಿಸುತ್ತಿರುವ ಜನರು ಕಾರ್ಯಕ್ರಮದ ಮಧ್ಯೆ ಬೇಸರದಿಂದ ತೊರೆಯುತ್ತಿದ್ದಾರೆ. ಇದನ್ನು ನೋಡಿದಾಗಲೇ ಜನರಿಗೆ ಅವರ ಮೇಲೆ ಇರುವ ನಂಬಿಕೆ ಏನು ಎನ್ನುವುದು ತಿಳಿಯುತ್ತಿದೆ. ಟ್ರಂಪ್ ಯಾವುದೇ ಯೋಜನೆಯನ್ನು ಹೊಂದಿಲ್ಲ. ದೇಶದ ರಾಜಧಾನಿಯಲ್ಲಿ ಗಲಾಟೆ ನಡೆಸಲು ಟ್ರಂಪ್ ಭಾಷಣ ಮಾಡಿ ಹಿಂಸಾತ್ಮಕ ಗುಂಪು ಪ್ರಚೋದಿಸಿದರು. ಅವರ ಪಕ್ಷದಲ್ಲೇ ಬೆಂಬಲ ಸಿಗುತ್ತಿಲ್ಲ. ಟ್ರಂಪ್ ಅವಧಿಯಲ್ಲಿ ಕೆಲಸ ಮಾಡಿದ 200ಕ್ಕೂ ಅಧಿಕ ರಿಪಬ್ಲಿಕನ್ ಗಳು ನನ್ನನ್ನು ಬೆಂಬಲಿಸಿದ್ದಾರೆ. ಟ್ರಂಪ್ ನೋಡಿ ಎಲ್ಲ ನಾಯಕರು ನಗುತ್ತಿದ್ದಾರೆ ಎಂದು ಕಮಲಾ ಆರೋಪಿಸಿದರು.








