UP Election – ಮಧ್ಯಾಹ್ನ 1 ಗಂಟೆಯವರೆಗೆ 36% ರಷ್ಟು ಮತದಾನ
ಇಂದು ಉತ್ತರ ಪ್ರದೇಶದಲ್ಲಿ ಆರನೇ ಹಂತದ ವಿಧಾನಸಭಾ ಚುನಾವಣೆಯ ಮತದಾನ ನಡೆಯುತ್ತಿದೆ. ಮಧ್ಯಾಹ್ನ 1 ಗಂಟೆಯವರೆಗೆ ಶೇ.36 ರಷ್ಟು ಮತದಾನವಾಗಿದೆ. 10 ಜಿಲ್ಲೆಗಳಲ್ಲಿ ಹರಡಿರುವ 57 ಸ್ಥಾನಗಳಿಗೆ 676 ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಈ ಪೈಕಿ ಗೋರಖ್‌ಪುರ ನಗರದಿಂದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸ್ಪರ್ಧಿಸಿರುವ ಪ್ರಮುಖ ವ್ಯಕ್ತಿಯಾಗಿದ್ದಾರೆ. ಬೆಳಗ್ಗೆ 7 ಗಂಟೆಗೆ ಆರಂಭವಾದ ಮತದಾನ ಸಂಜೆ 6ರವರೆಗೆ ನಡೆಯಲಿದೆ. ಸುಮಾರು 2.15 ಕೋಟಿ ಜನರು ಮತದಾನಕ್ಕೆ ಅರ್ಹರಾಗಿದ್ದಾರೆ.
ಇಲ್ಲಿಯವರೆಗೆ 403 ವಿಧಾನಸಭಾ ಸ್ಥಾನಗಳ ಪೈಕಿ 292 ಸ್ಥಾನಗಳಿಗೆ ಮತದಾನ ಪೂರ್ಣಗೊಂಡಿದೆ. ಉಳಿದ 54 ಸ್ಥಾನಗಳಿಗೆ ಅಂತಿಮ ಹಂತದ ಚುನಾವಣೆ ಮಾರ್ಚ್ 7 ರಂದು ನಡೆಯಲಿದೆ.
ಅಂಬೇಡ್ಕರ್‌ನಗರ, ಬಲರಾಂಪುರ್, ಸಿದ್ಧಾರ್ಥ್ ನಗರ, ಬಸ್ತಿ, ಸಂತ ಕಬೀರ್ ನಗರ, ಮಹಾರಾಜ್‌ಗಂಜ್, ಗೋರಖ್‌ಪುರ, ಕುಶಿನಗರ, ಡಿಯೋರಿಯಾ ಮತ್ತು ಬಲ್ಲಿಯಾ ಜಿಲ್ಲೆಗಳಲ್ಲಿ ಗುರುವಾರ ಮತದಾನ ನಡೆಯುತ್ತಿದೆ.
2017ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 57 ಸ್ಥಾನಗಳಲ್ಲಿ 46 ಸ್ಥಾನಗಳನ್ನು ಗೆದ್ದಿತ್ತು. ಭಾರತೀಯ ಚುನಾವಣಾ ಆಯೋಗದ ಮತದಾನದ ಆ್ಯಪ್ ಪ್ರಕಾರ ಮಧ್ಯಾಹ್ನ 1 ಗಂಟೆಯವರೆಗೆ 36.33 ರಷ್ಟು ಮತದಾನವಾಗಿದೆ.
ಅಂಬೇಡ್ಕರ್‌ನಗರ ಶೇ.40.36 ಮತದಾನವಾಗಿದ್ದರೆ, ಬಲ್ಲಿಯಾ ಶೇ.36.27, ಬಲರಾಂಪುರ ಶೇ.29.6, ಬಸ್ತಿ ಶೇ.37.49, ಡಿಯೋರಿಯಾ ಶೇ.35.02, ಗೋರಖ್‌ಪುರ ಶೇ.36.57, ಕುಶಿನಗರ ಶೇ.39.33, ಮಹರಾಜ್‌ಗಂಜ್ ಶೇ.3.3.39. ಕಾಜಿನಗರ ಶೇ.3.39 ಮತ್ತು ಸಿದ್ಧಾರ್ಥನಗರ ಶೇ 36.51 ರಷ್ಟು ಮತದಾನ ಜರುಗಿದೆ.