ತನ್ನ ತಾಯಿಯ ಮೃತದೇಹದ ಜೊತೆಗೆ 10 ದಿನಗಳ ಕಾಲ ಯುವತಿಯೊಬ್ಬಳು ಕಾಲ ಕಳೆದಿರುವ ವಿಲಕ್ಷಣ ಘಟನೆ ಉತ್ತರಪ್ರದೇಶದ ಲಕ್ನೋದ ಇಂದಿರಾ ನಗರದಲ್ಲಿ ನಡೆದಿದೆ..
ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ನಿಂದ ನಿವೃತ್ತಿಯಾಗಿದ್ದ ಸುನೀತಾ ದೀಕ್ಷಿತ್ ಎಂಬುವವರು ಮೃತಪಟ್ಟಿದ್ದರು.. ಅವರ 26 ವರ್ಷದ ಮಗಳಾದ ಅಂಕಿತಾ ದೀಕ್ಷಿತ್ ಅದೇ ಮನೆಯ ಮತ್ತೊಂದು ಕೋಣೆಯಲ್ಲಿ ಕಾಲ ಕಳೆದಿದ್ದಾಳೆ.. ಇನ್ನೊಂದು ಕೋಣೆಯಲ್ಲಿ ತಾಯಿ ಸತ್ತು ಬಿದ್ದಿದ್ದರೂ ಯಾವೊಬ್ಬ ಕುಟುಂಬಸ್ಥರಿಗೂ ಈ ಬಗ್ಗೆ ಮಾಹಿತಿ ನೀಡಿಲ್ಲ ಅಂಕಿತಾ..
ಮನೆಯಿಂದ ವಾಸನೆ ಬರುತ್ತಿರುವುದನ್ನು ಗಮನಿಸಿದ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದಾಗ ಘಟನೆ ಬೆಳಕಿಗೆ ಬಂದಿದೆ.
ನಂತರ ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹವನ್ನ ಹೊರತೆಗೆದಿದ್ದಾರೆ. ಮೊದಲಿಗೆ ಪೊಲೀಸರು ಬಂದಾಗ ಮನೆಯ ಬಾಗಿಲಿಗೆ ಬೀಗ ಹಾಕಿರುವುದು ಕಂಡು ಬಂದಿದೆ. ಆದರೆ ಮನೆಯೊಳಗೆ ಯುವತಿ ಧ್ವನಿ ಕೇಳಿಸಿಕೊಂಡ ಪೊಲೀಸರು, ಬಾಗಿಲನ್ನು ತಟ್ಟಿದ್ದಾರೆ. ಆದರೆ ಬಾಗಿಲು ತೆರೆಯಲು ಅಂಕಿತಾ ಹಿಂದೇಟು ಹಾಕಿದಾಗ ಪೋಲಿಸರು ಬಲವಂತವಾಗಿ ಬಾಗಿಲು ಮುರಿಸಿ ಮನೆಗೆ ಸುಗ್ಗಿದ್ದಾರೆ.
ಈ ವೇಳೆ ಅಂಕಿತಾ ಮಾನಸಿಕ ಸ್ಥಿತಿ ಸರಿಯಿಲ್ಲ ಎಂಬ ವಿಚಾರ ತಿಳಿದುಬಂದಿದೆ.
ಇದೀಗ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಸದ್ಯ ಮಹಿಳೆ ಸಾವಿಗೆ ಕಾರಣ ಏನೆಂಬುದು ಇನ್ನೂ ತಿಳಿದುಬಂದಿಲ್ಲ.