Uttarapradesha – ಕೈಯಲ್ಲಿದ್ದ ಮಗು ಕಿತ್ತುಕೊಂಡು 3 ನೇ ಮಹಡಿಯಿಂದ ಎಸೆದ ಕೋತಿ – ಮಗು ಸಾವು..
ನಾಲ್ಕು ತಿಂಗಳ ಗಂಡು ಮಗುವನ್ನ ತಂದೆ ಕೈಯಿಂದ ಕಿತ್ತುಕೊಂಡ ಕೋತಿ ಮನೆಯ ಮೂರನೇ ಮಹಡಿಯ ಛಾವಣಿಯಿಂದ ಎಸೆದಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಪರಿಣಾಮ ಮಗು ಸ್ಥಳದಲ್ಲೇ ಸಾವನ್ನಪ್ಪಿದೆ.
ಶುಕ್ರವಾರ ಸಂಜೆ ಉತ್ತರಪ್ರದೇಶದ ಬರೇಲಿ ಜಿಲ್ಲೆಯ ಶಾಹಿ ಪೊಲೀಸ್ ಠಾಣೆ ವ್ಯಾಪ್ತಿಯ ಡುಂಕಾ ಗ್ರಾಮದ ನಿವಾಸಿ 25 ವರ್ಷದ ನಿರ್ದೇಶ್ ಉಪಾಧ್ಯಾಯ ಮಗುವನ್ನ ಕೈಲಿ ಹಿಡಿದುಕೊಂಡು ಪತ್ನಿ ಜೊತೆಗೆ ಸಂಜೆ ಮೂರು ಅಂತಸ್ತಿನ ಮನೆಯ ಟೆರೇಸ್‍ನಲ್ಲಿ ವಾಕಿಂಗ್ ಮಾಡುತ್ತಿದ್ದರು. ಈ ವೇಳೆ ಛಾವಣಿಯ ಮೇಲೆ ಕೋತಿಗಳ ಹಿಂಡು ಕಾಣಿಸಿಕೊಂಡಿದೆ. ಇದರಿಂದ ಗಾಬರಿಗೊಂಡ ದಂಪತಿ ಕೋತಿಗಳನ್ನು ಓಡಿಸಲು ಪ್ರಯತ್ನಿಸಿದ್ದಾರೆ. ಆದರೆ ಈ ವೇಳೆ ಕೋತಿಗಳು ನಿರ್ದೇಶ್ ಉಪಾಧ್ಯಾಯ ಅವರನ್ನ ಸುತ್ತುವರೆದಿವೆ.
ಕೊನೆಗೆ ಮೆಟ್ಟಿಲಿನಿಂದ ಮನೆಗೆ ಹೋಗಲು ಪ್ರಯತ್ನಿಸುವಾಗ ಕೈ ಜಾರಿ ಮಗು ಕೆಳಗೆ ಬಿದ್ದಿದೆ. ಮಗುವನ್ನು ನಿರ್ದೇಶ್ ಹಿಡಿದುಕೊಳ್ಳುವಷ್ಟೋತ್ತಿಗೆ ಕೋತಿಯೊಂದು ಮಗುವನ್ನು ಎತ್ತಿಕೊಂಡು ಛಾವಣಿ ಮೇಲಿಂದ ಕೆಳಗೆ ಎಸೆದಿದೆ. ಕೆಳಗೆ ಬಿದ್ದ ಮಗು ಸ್ಥಳದಲ್ಲಿಯೇ ಸಾವನ್ನಪ್ಪಿದೆ.
ಘಟನೆ ಸಂಬಂಧ ಬರೇಲಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಲಲಿತ್ ವರ್ಮಾ ಅವರು ಮಾತನಾಡಿದ್ದು, ಈ ಬಗ್ಗೆ ತನಿಖೆ ನಡೆಸಲು ಅರಣ್ಯ ಇಲಾಖೆಯ ತಂಡವನ್ನು ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.