V. Somanna | ಮದುವೆಯಾದ ಬಡ ದಂಪತಿಗೆ 50 ಸಾವಿರ ಸಹಾಯಧನ
ಬೆಂಗಳೂರು: ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಬಿಜಿಎಸ್ ಕ್ರೀಡಾಂಗಣದಲ್ಲಿ ಕಾರ್ಮಿಕ ಇಲಾಖೆ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಕಟ್ಟಡ ಕಾರ್ಮಿಕರಿಗೆ ವಿವಿಧ ಸೌಲಭ್ಯ ವಿತರಣಾ ಸಮಾರಂಭವನ್ನು ಜ್ಯೋತಿಬೆಳಗುವ ಮೂಲಕ ಮಾನ್ಯ ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು ಹಾಗೂ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ವಿ.ಸೋಮಣ್ಣ ರವರು ಉದ್ಘಾಟಿಸಿದರು.
ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಸಚಿವರು ಕಟ್ಟಡ ಕಾರ್ಮಿಕರಿಗೆ, ಅಸಂಘಟಿತ ಕಾರ್ಮಿಕರಿಗೆ 45 ಕಿ.ಮೀ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ಕಲ್ಪಿಸಿದ್ದೇವೆ ಮುಂದಿನ ದಿನಗಳಲ್ಲಿ 100 ಕಿ.ಮೀ ವರೆಗಿನ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.
ಮದುವೆಯಾದ ಬಡ ದಂಪತಿಗೆ 50 ಸಾವಿರ ಸಹಾಯಧನ, ಉಚಿತ ಆರೋಗ್ಯ ಸೇವೆ ಸೌಲಭ್ಯವನ್ನ ನೀಡಲಾಗ್ತಿದ್ದು ವೈದ್ಯಕೀಯ ವೆಚ್ಚವನ್ನು 2 ಲಕ್ಷ ರೂ. ನೀಡಲಾಗುತ್ತಿದೆ. ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ 3,000 ಹೆಚ್ಚು ಕಾರ್ಮಿಕರಿಗೆ ಲೇಬರ್ ಕಾರ್ಡ್ ಮಾಡಿಕೊಡಲಾಗಿದೆ. ವಸತಿ ಇಲಾಖೆಯಿಂದ ಕಾರ್ಮಿಕರಿಗೆ ಸೂರು ಕಲ್ಪಿಸುವ ವ್ಯವಸ್ಥೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಹೆಣ್ಣುಮಕ್ಳಿಗೆ 50,000, ಗಂಡುಮಕ್ಕಳಿಗೆ 30,000 ಹೆಚ್ಚಳ ಮಾಡುವಂತೆ ಸಿಎಂ ಅವರ ಜೊತೆ ಮಾತನಾಡುತ್ತೇನೆ ಎಂದರು.
ಬಡವರ ಪರ ಸದಾ ಕಾರ್ಯೋನ್ಮುಖವಾಗಿರುವ ಸರ್ಕಾರ ಬಿಜೆಪಿ
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವ, ಸಿಎಂ ಬಸವಾರಜ ಬೊಮ್ಮಾಯಿಯರವರ ಸಹಕಾರದೊಂದಿಗೆ ಅನೇಕ ಯೋಜನೆಗಳು ಕರ್ನಾಟಕದ ಬಡ ಮತ್ತು ಮಧ್ಯಮವರ್ಗದ ಜನರಿಗೆ ತಲುಪುತ್ತಿವೆ ಎಂದರು. ಕಳೆದ 75 ವರ್ಷಗಳಿಂದ ಆಗಲಾರದ ಅದೆಷ್ಟೋ ಕೆಲಸಗಳು ಈಗ ಮೋದಿ ಅವರ ನೇತೃತ್ವದ ಸರ್ಕಾರದಲ್ಲಿ ಆಗುತ್ತಿವೆ. ನಿಮ್ಮ ಹಕ್ಕನ್ನು ನೀವೂ ಪಡೆಯಲು 75 ವರ್ಷಗಳು ಬೇಕಾಯಿತು. ಬಡವರ ಪರ ಸದಾ ಕಾರ್ಯೋನ್ಮುಖವಾಗಿರುವ ಸರ್ಕಾರ ಅಂದ್ರೆ ಅದು ಬಿಜೆಪಿ ಸರ್ಕಾರ ಎಂದರು.