ಬೆಂಗಳೂರು: ಶಾಸಕ ಮುನಿರತ್ನ (Munirathna) ಮೇಲೆ ಮೊಟ್ಟೆ ಎಸೆತ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ವಶಕ್ಕೆ ಪಡೆದಿದ್ದರು. ಸದ್ಯ ಕೋರ್ಟ್ ಆರೋಪಿಗಳಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಪ್ರಕರಣದ ಆರೋಪಿಗಳಾದ ಚಂದ್ರು, ವಿಶ್ವನಾಥ, ಕೃಷ್ಣಮೂರ್ತಿಗೆ 32ನೇ ಎಸಿಎಂಎಂ ನ್ಯಾಯಾಲಯ (ACMM Court) ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ. ಲಗ್ಗೆರೆ ವಾರ್ಡ್ ನಲ್ಲಿರುವ ಲಕ್ಷ್ಮಿದೇವಿ ನಗರದಲ್ಲಿ ವಾಜಪೇಯಿ ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮರಳಿ ಹೋಗುತ್ತಿದ್ದ ಸಂದರ್ಭದಲ್ಲಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ದಾಳಿ ನಡೆದಿತ್ತು.
ಕೂಡಲೇ ದಾಳಿಕೋರರನ್ನು ಮುನಿರತ್ನ ಬೆಂಬಲಿಗರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಈ ಕೇಸ್ ದಾಖಲಿಸಿಕೊಂಡಿದ್ದ ನಂದಿನಿ ಲೇಔಟ್ ಪೊಲೀಸರು ಮೂವರು ಆರೋಪಿಗಳನ್ನ ಬಂಧಿಸಿದ್ದರು. ಇಂದು ಮೂವರು ಆರೋಪಿಗಳನ್ನು ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು.
ನಂತರ ಕೆ.ಸಿ ಜನರಲ್ ಆಸ್ಪತ್ರೆಗೆ ದಾಖಲಾಗಿದ್ದ ಶಾಸಕ ಮುನಿರತ್ನ, ವೈದ್ಯರ ಸೂಚನೆ ಮೇರೆಗೆ ಬುಧವಾರ ರಾತ್ರಿ ಆಸ್ಪತ್ರೆಯಲ್ಲೇ ಉಳಿದಿದ್ದರು. ಇಂದು ಬಿಡುಗಡೆಯಾಗಿದ್ದರು. ದಾಳಿ ಹಿಂದೆ ಡಿಸಿಎಂ ಡಿಕೆ ಶಿವಕುಮಾರ್, ಮಾಜಿ ಸಂಸದ ಡಿಕೆ ಸುರೇಶ್, ಕುಸುಮಾ, ಹನುಮಂತರಾಯಪ್ಪ ಇದ್ದಾರೆ ಎಂದು ಆರೋಪಿಸಿದ್ದಾರೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ ಜಾಮೀನು ಸಿಕ್ಕಿದೆ.








