ಬೆಂಗಳೂರು: ರಾಜ್ಯದಲ್ಲಿ ಮಹಾಮಳೆಯಿಂದ ಆದ ಅನಾಹುತಗಳ ಕುರಿತು ಸಚಿವ ವಿ ಸೋಮಣ್ಣ ಅವರು ವಿಧಾನಸೌಧದಲ್ಲಿ ಮಾತನಾಡಿದ್ದಾರೆ. “ ಪ್ರಕೃತಿ ವಿಕೋಪದಿಂದ ಕೊಡಗು ಜಿಲ್ಲೆಗೆ ತೊಂದರೆ ಆಗಿದೆ. ಜಿಲ್ಲಾಧಿಕಾರಿ ಗಳ ನೇತೃತ್ವದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಕೊಡಗಿಗೆ ಭೇಟಿ ನೀಡಿ ಮೂರ್ನಾಲ್ಕು ದಿನ ಅಲ್ಲೇ ಇದ್ದು ಕೆಲಸ ಮಾಡ್ತೇನೆ. ಜಿಲ್ಲಾಡಳಿತ ನಿಮಗಾಗಿ ಕೆಲಸ ಮಾಡ್ತಿದೆ ಹೆದರಬೇಡಿ” ಎಂದು ಪ್ರವಾಹದ ಭೀತಿಯಿಂದ ಆತಂಕಕ್ಕೆ ಒಳಗಾಗಿರುವ ಜನರಿಗೆ ಭರವಸೆ ನೀಡಿದ್ದಾರೆ.
ಇನ್ನೂ ಮುಂದುವರೆದು ಮಾತನಾಡಿರುವ ಸಚಿವರು “ ಬ್ರಹ್ಮಗಿರಿ ಬೆಟ್ಟ ಕುಸಿದಿದೆ. ಡಿಸಿಯಿಂದ ಕ್ಷಣಕ್ಷಣಕ್ಕೂ ಮಾಹಿತಿ ಪಡೆಯುತ್ತಿದ್ದೇನೆ. ಶಾಸಕ ಬೋಪಯ್ಯ, ಸುನೀಲ್ ಅಲ್ಲಿಗೆ ಹೋಗ್ತಿದ್ದಾರೆ. ರೆಸ್ಕ್ಯೂ ಆಪರೇಷನ್ ಈಗಾಗಲೇ ಪ್ರಾರಂಭವಾಗಿದೆ. ಅರ್ಚಕ ನಾರಾಯಣಾಚಾರ್ ಗೆ ಡಿಸಿ ಹೇಳಿದ್ದರು. ನೀವು ಇಲ್ಲಿರುವುದು ಬೇಡ ಎಂದು ಸಲಹೆ ಕೊಟ್ಟಿದ್ದರು. ಇವರ ಜೊತೆ ಐದು ಜನ ಮಿಸ್ ಆಗಿದ್ದಾರೆ. ಅವರನ್ನ ಪತ್ತೆ ಹಚ್ಚುವ ಕೆಲಸ ನಡೆಯುತ್ತಿದೆ. ಈಗಾಗಲೇ ಹೆಚ್ಚುವರಿ ಹಣ ಬಿಡುಗಡೆಗೆ ಸಿಎಂ ಸೂಚಿಸಿದ್ದಾರೆ. ಹಿಂದಿನ ಕಹಿ ಘಟನೆ ನಡೆಯದಂತೆ ಜಿಲ್ಲಾಡಳಿತ ಕ್ರಮತೆಗೆದುಕೊಂಡಿದೆ. ನಾನು ಇಂದು ಕೊಡಗಿಗೆ ಹೋಗ್ತಿದ್ದೇನೆ ಎಂದು ತಿಳಿಸಿದ್ದಾರೆ.








