ಪ್ರೀತಂಗೌಡ ಇನ್ನೂ ಹುಡುಗ, ಇತಿಮಿತಿಯಲ್ಲಿರಬೇಕು : ವಿ.ಸೋಮಣ್ಣ ಗರಂ
ಮಂಡ್ಯ : ಪ್ರೀತಂಗೌಡ ಇನ್ನೂ ಹುಡುಗ, ಇನ್ನೂ ಬೆಳೆಯಬೇಕಾದವನು. ಹೀಗಾಗಿ ಅವನು ಇತಿಮಿತಿಯಲ್ಲಿ ಇರಬೇಕು ಎಂದು ಸಚಿವ ವಿ.ಸೋಮಣ್ಣ ಚಾಟಿ ಬೀಸಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೆಚ್ ಡಿ ದೇವೇಗೌಡ ಅವರ ನಿವಾಸಕ್ಕೆ ಭೇಟಿ ನೀಡಿದ ವಿಚಾರವಾಗಿ ಶಾಸಕ ಪ್ರೀತಂಗೌಡ ಅಸಮಧಾನಗೊಂಡಿದ್ದರು. ಅಲ್ಲದೆ ಅಡ್ಜೆಸ್ಟ್ ಮೆಂಟ್ ರಾಜಕೀಯ ಬೇಡ ಎಂದು ಗುಡುಗಿದರು.
ಈ ವಿಚಾರವಾಗಿ ಶ್ರೀರಂಗಪಟ್ಟಣದಲ್ಲಿ ಮಾತನಾಡಿದ ವಿ ಸೋಮಣ್ಣ, ದೇವೇಗೌಡರ ಕುಟುಂಬಕ್ಕೆ 50 ವರ್ಷದ ರಾಜಕೀಯ ಇತಿಹಾಸವಿದೆ. ನಾನು ಸಚಿವ ಆಗಿದ್ದಾಗ ಪ್ರೀತಂಗೌಡ ಇನ್ನೂ ಹುಟ್ಟಿಯೇ ಇರಲಿಲ್ಲ. ದೇವೇಗೌಡರ ಮನೆಗೆ ಹೋಗುವುದರಲ್ಲಿ ಏನು ತಪ್ಪಿದೆ ಎಂದು ಪ್ರಶ್ನಿಸಿದರು.
ಇನ್ನು ದೇವೇಗೌಡರು ರಾಷ್ಟದ ಪ್ರಧಾನಿಗಳಾಗಿದ್ದಂತವರು, ನಾನು ಕೂಡ ಅವರ ಮನೆಗೆ ಹೋಗಿದ್ದೇನೆ. ಪ್ರೀತಂಗೌಡ ಇನ್ನೂ ಬೆಳೆಯಬೇಕಾದ ಹುಡುಗ, ಸುಮ್ಮನೆ ಹಾಗೆಲ್ಲಾ ಮಾತನಾಡುವುದು ಸರಿ ಅಲ್ಲ ಎಂದು ಪ್ರೀತಂಗೌಡಗೆ ಟಾಂಗ್ ನೀಡಿದರು.
ಇದೇ ವೇಳೆ ಸಚಿವರ ಖಾತೆ ಅಸಮಾಧಾನ ವಿಚಾರದ ಕುರಿತು ಮಾತನಾಡಿದ ಅವರು, ಈ ವಿಚಾರದಲ್ಲಿ ಯಾರಿಗೂ ಅಸಮಾಧಾನ ಇಲ್ಲ ಎಂದರು.










