ಗೋವಿಂದರಾಜನಗರದಲ್ಲಿ 15 ರಿಂದ 18 ವರ್ಷದ ಮಕ್ಕಳಿಗೆ ಕೋವಿಡ್ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿದ ಸಿಎಂ ಬೊಮ್ಮಾಯಿ

1 min read
Vacation 15-18 Saaksha tv

ಗೋವಿಂದರಾಜನಗರದಲ್ಲಿ 15 ರಿಂದ 18 ವರ್ಷದ ಮಕ್ಕಳಿಗೆ ಕೋವಿಡ್ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿದ ಸಿಎಂ ಬೊಮ್ಮಾಯಿ Saaksha Tv

ಬೆಂಗಳೂರು: ರಾಜ್ಯದ 15-18 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ವಿತರಣೆ ಇಂದಿನಿಂದ ಆರಂಭವಾಗಿದೆ. ಇಂದು ಬಿಬಿಎಂಪಿ ಮಹಿಳೆಯರ ಪದವಿ ಮತ್ತು ಸ್ನಾತಕೋತ್ತರ ಕಾಲೇಜು ಮೂಡಲಪಾಳ್ಯದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಮಕ್ಕಳ ಲಸಿಕೆ ಅಭಿಯಾನವನ್ನು ಉದ್ಘಾಟನೆಗೊಳಿಸಿದರು. ಸಾಂಕೇತಿಕವಾಗಿ ಆರು ಮಂದಿ ವಿದ್ಯಾರ್ಥಿಗಳಿಗೆ ಕೋವ್ಯಾಕ್ಸಿನ್ ಲಸಿಕೆ ನೀಡಲಾಯಿತು. 28 ದಿನಗಳ ಬಳಿಕ ಎರಡನೇ ಡೋಸ್ ಪಡೆಯಲಿದ್ದಾರೆ. ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಭೈರವೇಶ್ವರ ನಗರದಲ್ಲಿರುವ ಬಿಬಿಎಂಪಿ ಶಾಲೆಯಲ್ಲಿ  ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು.

ರಾಜ್ಯದಲ್ಲಿ 43 ಲಕ್ಷ, ಬೆಂಗಳೂರಲ್ಲಿ ಒಟ್ಟು 4 ಲಕ್ಷ 41 ಸಾವಿರ ಮಕ್ಕಳಿಗೆ ಲಸಿಕೆ ನೀಡಲಾಗುತ್ತಿದೆ. ಇಂದು ಒಂದೇ ದಿನ 61 ಸಾವಿರ ಮಕ್ಕಳಿಗೆ ಲಸಿಕೆ ನೀಡಲು ಸಿದ್ಧತೆ ಮಾಡಲಾಗುತ್ತಿದೆ. ನಗರದ 255 ಶಾಲಾ ಕಾಲೇಜಿನಲ್ಲಿ ಲಸಿಕೆ ಕೊಡಲಾಗುತ್ತದೆ.

ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ಲಸಿಕಾ ಕಾರ್ಯಕ್ರಮ ಹೊಸ ವರ್ಷದಲ್ಲಿ ಆಗ್ತಿದೆ. ಎಲ್ಲರೂ ಸುರಕ್ಷಿತ ಆರೋಗ್ಯ ಭಾಗ್ಯ ನಿಮ್ಮದಾಗಲಿ. ಕೊರೊನ ಯಾರೂ ನಿರೀಕ್ಷಿಸಿರಲಿಲ್ಲ. ದೇಶ ಕೊರೊನಾ ಎದುರಿಸಿದ ರೀತಿ ಹಾಗೂ ಲಸಿಕೆ ಅಭಿಯಾನ ಇಡೀ ವಿಶ್ವಕ್ಕೇ ಮಾದರಿಯಾಗಿದೆ. ಮೂರನೆ ಅಲೆ ಅಕ್ಕಪಕ್ಕದ ರಾಜ್ಯದಲ್ಲಿ ಬಹಳ ಹೆಚ್ಚಿದೆ. ರಾಜ್ಯದಲ್ಲಿ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗ್ತಿದೆ. ಗಡಿಯಲ್ಲಿ ಭದ್ರತೆ, ಆರ್ ಟಿಪಿಸಿಆರ್ ಪರೀಕ್ಷೆ, ಕೋವಿಡ್ ಟೆಸ್ಟ್, ಲಸಿಕೆ ಹೆಚ್ಚು ಮಾಡಲಾಗುತ್ತಿದೆ. ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದೆ. ಕಳೆದ ಒಂದು ವಾರದಿಂದ ರಾಜ್ಯದಲ್ಲಿ ಸೋಂಕು ಹೆಚ್ಚಾಗಿದೆ. ಮಕ್ಕಳ ಆರೋಗ್ಯ ಬಹಳ ಮುಖ್ಯ. ಇಂದಿನಿಂದ ಪ್ರಥಮ ಲಸಿಕೆ ಡೋಸ್ ನೀಡಲಾಗುತ್ತದೆ. 2 ನೇ ಡೋಸ್ ಕೂಡಾ ಅವಧಿ ಬಂದಾಗ ಆರಂಭಿಸಲಾಗುತ್ತದೆ ಎಂದರು.

ವಸತಿ ಸಚಿವ ವಿ.ಸೋಮಣ್ಣ ಮಾತನಾಡಿ, ಮೂರನೇ ಅಲೆ ಎಷ್ಟರ ಮಟ್ಟಿಗೆ ಗಂಭೀರ ಅನ್ನುವುದಕ್ಕಿಂತ ಎಲ್ಲರೂ ಲಸಿಕೆ ಪಡೆಯುವುದು ಮುಖ್ಯ. ಜನಜಂಗುಳಿ ತಪ್ಪಿಸಿ, ಮಾಸ್ಕ್ ಧರಿಸುವುದರಿಂದ ಈ ಸೋಂಕನ್ನು ತಡೆಗಟ್ಟಬಹುದು. ಕೋವಿಡ್ ಮೂರನೇ ಅಲೆಯ ಬಗ್ಗೆ ನಾವೆಲ್ಲ ಜಾಗರೂಕರಾಗಿರಬೇಕು. ಉದಾಸೀನ ಮಾಡುವುದರಿಂದ ಸಮಸ್ಯೆಯಾಗುತ್ತದೆ. ಹೀಗಾಗಿ ತಪ್ಪದೇ ಕೋವಿಡ್ ಸುರಕ್ಷತಾ ನಿಯಮಗಳನ್ನು ಪಾಲಿಸುವುದರ ಜೊತೆಗೆ ಲಸಿಕೆಯನ್ನು ಹಾಕಿಸಿಕೊಳ್ಳಿ. ಇಂದಿನಿಂದ ಲಕ್ಷಾಂತರ ಮಕ್ಕಳಿಗೆ ಲಸಿಕೆ ನೀಡುವ ಕಾರ್ಯ ಆರಂಭವಾಗಿದೆ. ಸಾಂಕೇತಿಕವಾಗಿ ಸ್ವಕ್ಷೇತ್ರದಲ್ಲಿ ಲಸಿಕಾ ಕಾರ್ಯಕ್ರಮ ನಡೆಯುತ್ತಿರುವುದು ಸಂತಸ ತಂದಿದೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಕೋವಿಡ್ ಪಾಸಿಟಿವಿಟಿ ರೇಟ್ ಕಡಿಮೆಯಿದೆ. ರಾಜ್ಯದಲ್ಲಿ ಸುವ್ಯವಸ್ಥಿತವಾದ ವಾತಾವರಣ ನಿರ್ಮಾಣವಾಗಿದ್ದು ಕೋವಿಡ್ ಗೆ ಸಂಬಂಧಿಸಿದಂತೆ ಅತ್ಯುತ್ತಮ ಚಿಕಿತ್ಸೆ ಲಭ್ಯವಿದೆ. ಅಲ್ಲದೇ ಗೋವಿಂದರಾಜನಗರ ಕ್ಷೇತ್ರದಲ್ಲಿ ಜನರ ಆರೋಗ್ಯ ಸುರಕ್ಷತೆಗೆ ಸಂಬಂಧಿಸಿದಂತೆ ಸಾಕಷ್ಟು ಸುಸಜ್ಜಿತ ಆಸ್ಪತ್ರೆಗಳನ್ನು ನಿರ್ಮಿಸಲಾಗಿದೆ. ಇನ್ನು ಮುಖ್ಯಮಂತ್ರಿ ಬೊಮ್ಮಾಯಿ ಅವರು ನನ್ನ ಕ್ಷೇತ್ರಕ್ಕೆ ಮೂರು ಬಾರಿ ಬಂದಿರುವುದು ಖುಷಿ ತಂದಿದೆ ಎಂದರು.

ಡಾ.ಕೆ.ಸುಧಾಕರ್ ಮಾತನಾಡಿ, ಹದಿನೈದರಿಂದ 18 ವರ್ಷದ ಮಕ್ಕಳಿಗೆ ಲಸಿಕೆ ಆರಂಭ ಮಾಡಿದ್ದೇವೆ. ಅವರ ಜೊತೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದೇವೆ. ಲಸಿಕೆ ಕೊಡುವುದರಲ್ಲಿ ದೇಶ ಸಾಧನೆ ಮಾಡಿದೆ. ರಾಜ್ಯದಲ್ಲಿ ಮಕ್ಕಳ ಲಸಿಕೆ ಯಶಸ್ವಿ ಮಾಡಲು ಅನೇಕ ಸುತ್ತಿನ ಸಭೆ ನಡೆಸಲಾಗಿದೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ಕೋವಿಡ್ ಹರಡುವಿಕೆ ಪ್ರಮಾಣ ಬಹಳ ಕಡಿಮೆ ಇದೆ. ರಾಜ್ಯದಲ್ಲಿ 0.4% ಪಾಸಿಟಿವಿಟಿ ಪ್ರಮಾಣ ಇದೆ. ಇಂದು ಸಂಜೆಯೂ ಸಭೆ ನಡೆಸಲಾಗುತ್ತಿದೆ. 9 ರಿಂದ ದ್ವಿತೀಯ  ಪಿಯುಸಿಯ ಮಕ್ಕಳು ಲಸಿಕೆ ಪಡೆದುಕೊಳ್ಳಬೇಕು. ಇಡೀ ರಾಜ್ಯದಲ್ಲಿ ಈ ವರೆಗೆ 8 ಕೋಟಿ 65 ಲಕ್ಷ ಜನಕ್ಕೆ ಲಸಿಕೆ ನೀಡಲಾಗಿದೆ ಎಂದರು.

ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ,ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ , ಆಡಳಿತಾಧಿಕಾರಿ ರಾಕೇಶ್ ಸಿಂಗ್ , ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd