ಈ ಬಾಲಕನ ಆಟಕ್ಕೆ ಏನು ಅನ್ನಬೇಕು ಎಂಬುದೇ ಗೊತ್ತಾಗುತ್ತಿಲ್ಲ. ಹೊಡಿಬಡಿ ಆಟ.. ಯಾವಾಗ ಔಟ್ ಆಗ್ತಾನೋ ಗೊತ್ತಿಲ್ಲ.. ಆದ್ರೂ ಕ್ರೀಸ್ನಲ್ಲಿದ್ದಷ್ಟು ಸಮಯವಂತೂ ಪಕ್ಕಾ ಮನರಂಜನೆ.. ತನ್ನ ಹೆಸರಿಗೆ ತಕ್ಕಂತೆ ವೈಭವದ ಆಟದ ಮೂಲಕ ಅಂಗಣದಲ್ಲಿ ಸೂರ್ಯನಂತೆ ಕಂಗೋಳಿಸುತ್ತಾನೆ.
ಹೌದು, ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ 19 ವಯೋಮಿತಿ ಏಕದಿನ ಕ್ರಿಕೆಟ್ನಲ್ಲಿ ವೈಭವ್ ಸೂರ್ಯವಂಶಿ ಮತ್ತೊಂದು ದಾಖಲೆ ಬರೆದಿದ್ದಾನೆ. ಐಪಿಎಲ್ನಲ್ಲಿ ಶತಕ ಸಿಡಿಸಿದ್ದ ನಂತ್ರ ಈಗ ಏಕದಿನ ಕ್ರಿಕೆಟ್ನಲ್ಲೂ ವೇಗದ ಶತಕದ ದಾಖಲೆ ಬರೆದಿದ್ದಾನೆ. ಕೇವಲ 52 ಎಸೆತಗಳಲ್ಲಿ ಮಿಂಚಿನ ಶತಕ ಸಿಡಿಸಿದ್ದ ವೈಭವ್, ಪೆವಿಲಿಯನ್ನತ್ತ ಹೆಜ್ಜೆ ಹಾಕಿದ್ದಾಗ ಕೇವಲ 78 ಎಸೆತಗಳಲ್ಲಿ 143 ಗಳಿಸಿದ್ದಾನೆ. ಇದರಲ್ಲಿ ಹತ್ತು ಸಿಕ್ಸರ್ಗಳು ಹಾಗೂ 13 ಬೌಂಡರಿಗಳಿದ್ದವು. ಈ ಮೂಲಕ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಪಂದ್ಯದಲ್ಲಿ ಭಾರತದ ಕಿರಿಯರ ತಂಡ 9 ವಿಕೆಟ್ ನಷ್ಟಕ್ಕೆ 363 ರನ್ ದಾಖಲಿಸಿತ್ತು.
ಭಾರತ ಕಿರಿಯರ ತಂಡದ ಆರಂಭಿಕ ಆಟಗಾರನಾಗಿರುವ ವೈಭವ್ ಸೂರ್ಯವಂಶಿ ಈಗಾಗಲೇ ನಡೆದಿರುವ ಮೂರು ಪಂದ್ಯಗಳಲ್ಲಿ ಕ್ರಮವಾಗಿ 48, 45 ಹಾಗೂ 86 ರನ್ ಗಳಿಸಿದ್ದಾನೆ. ಹಾಗೇ ನಾಲ್ಕನೇ ಪಂದ್ಯದಲ್ಲಿ ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ ವೈಭವ್ ಸೂರ್ಯವಂಶಿ ಟೀಮ್ ಇಂಡಿಯಾದ ಗರ್ಭಗುಡಿಯ ಕದ ತಟ್ಟುತ್ತಿದ್ದಾನೆ.
ವೈಭವ್ ಸೂರ್ಯವಂಶಿಯ ಅಬ್ಬರದ ಬ್ಯಾಟಿಂಗ್ ಮುಂದೆ ಹಳೆಯದ ದಾಖಲೆಗಳು ಉಢೀಸ್ ಆಗಿವೆ. ಈ ಹಿಂದೆ ಅಂದ್ರೆ 2013ರಲ್ಲಿ ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನದ ಕಮ್ರಾನ್ ಘುಲಾಮ್ 53 ಎಸೆತಗಳಲ್ಲಿ ವೇಗದ ಶತಕ ದಾಖಲಿಸಿದ್ದ. ಇದೀಗ ಆ ದಾಖಲೆ ಸೂರ್ಯವಂಶಿಯ ಹೆಸರಿಗೆ ಅಂಟಿಕೊಂಡಿದೆ.
2025ರ ಐಪಿಎಲ್ನಲ್ಲಿ ರಾಜಸ್ತಾನ ರಾಯಲ್ಸ್ ಪರ ಆಡಿದ್ದ ವೈಭವ್ ಸೂರ್ಯವಂಶಿ ಸಾಕಷ್ಟು ಸದ್ದು ಮಾಡಿದ್ದ. ಕೇವಲ 35 ಎಸೆತಗಳಲ್ಲಿ ಶತಕ ದಾಖಲಿಸಿದ್ದ ಸೂರ್ಯವಂಶಿ ಐಪಿಎಲ್ನಲ್ಲಿ ಎದುರಿಸಿದ್ದ ಮೊದಲ ಎಸೆತವನ್ನೇ ಸಿಕ್ಸರ್ಗಟ್ಟಿದ್ದ ಪೋರ ಕೂಡ ಹೌದು.
ಸದ್ಯ ಇಂಗ್ಲೆಂಡ್ನಲ್ಲಿ ಮಿಂಚು ಹರಿಸುತ್ತಿರುವ ವೈಭವ್ ಸೂರ್ಯವಂಶಿ ಭವಿಷ್ಯದ ಟೀಮ್ ಇಂಡಿಯಾದ ತಾರೆ ಎಂಬುದರಲ್ಲಿ ಎರಡು ಮಾತಿಲ್ಲ. ಆದ್ರೆ ನೆನಪಿಡಿ… ಯಶಸ್ಸು ತಲೆಗೆ ಹತ್ತಿದ್ರೆ ಮತ್ತೊಬ್ಬ ಕಾಂಬ್ಳಿ, ಮತ್ತೊಬ್ಬ ಪೃಥ್ವಿ ಶಾ ಆಗೋ ಅಪಾಯವೂ ಇದೆ. ಆದ್ರೆ ಸೂರ್ಯವಂಶಿ ಹಾಗಾಗದಿರಲಿ.. ಯಶಸ್ಸಿನ ಜೊತೆಗೆ ಆಟದ ಕಡೆಗೂ ಗಮನಹರಿಸಿದ್ರೆ ಮುಂದೊಂದು ದಿನ ಸಚಿನ್, ಕೊಹ್ಲಿಯ ದಾಖಲೆಗಳು ವೈಭವನ ಹೆಸರಿಗೆ ಸೇರಿಕೊಳ್ಳಬಹುದು. ಅಂತಹುದ್ದೊಂದು ಅವಕಾಶ ವೈಭವ್ಗೆ ಸಿಕ್ಕಿದೆ. ಅಷ್ಟೇ ಅಲ್ಲ, ಸಚಿನ್ನಂತೆ ಹದಿಹರೆಯದಲ್ಲೇ ವೈಭವ್ಗೂ ಟೀಮ್ ಇಂಡಿಯಾಗೆ ಅವಕಾಶ ಸಿಕ್ಕರೂ ಸಿಗಬಹುದು.. ಯಾವನಿಗೊತ್ತು.. ವಿಧಿಯಾಟ ಹೇಗೆಲ್ಲಾ ಇರುತ್ತೆ ಅಂತ..!








