ಫೆಬ್ರವರಿ 14, ಆ ದಿನ ಪ್ರೇಮಿಗಳಿಗೆ ಹಬ್ಬವೋ ಹಬ್ಬ. ಆದ್ರೆ ಭಾರತದಲ್ಲಿ ಪುಲ್ವಾಮಾ ದಾಳಿಯಿಂದಾಗಿ ಫೆಬ್ರವರಿ 14 ರಂದು ಕರಾಳ ದಿನವಾಗಿ ಘೋಷಿಸಲಾಯಿತು. ಆದ್ರೆ ಈ ಪ್ರೇಮಿಗಳ ದಿನಕ್ಕೂ ಅರವಿಂದ್ ಕೇಜ್ರಿವಾಲ್ ಅವರಿಗೂ ಬಿಡಲಾರದ ನಂಟಿದೆ. ಹೌದು,ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಪ್ ಭರ್ಜರಿ ಹ್ಯಾಟ್ರಿಕ್ ಗೆಲುವು ಸಾಧಿಸಿದೆ. ಬಹುತೇಕ ಕೇಜ್ರಿವಾಲ್ ಅವರೇ ಮುಂದಿನ ಸಿಎಂ ಆಗಿ ಮುಂದುವರೆಯಲಿದ್ದು, ಫೆಬ್ರವರಿ 14 ರಂದು ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.ಅಂದಹಾಗೆ 2015 ರ ವಿಧಾನಸಭಾ ಚುನಾವಣೆಯಲ್ಲಿ ಗೆದ್ದಾಗ್ಲೂ ಕೇಜ್ರಿವಾಲ್ ಫೆಬ್ರವರಿ 14 ರಂದೇ ಪ್ರಮಾಣವಚನ ಸ್ವೀಕರಿಸಿದ್ರು. ಹಾಗಾಗಿ ಈ ಬಾರಿಯೂ ಅಂದೇ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಫೆಬ್ರವರಿ 14 ರಂದೇ ಪದಗ್ರಹಣ ಯಾಕೆ?
2012 ನವೆಂಬರ್ ನಲ್ಲಿ ಸ್ಥಾಪನೆಯಾದ ಆಪ್ ಆದ್ಮಿ ಪಾರ್ಟಿ, 2013ರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗೆ ಟಕ್ಕರ್ ನೀಡಿ, ಬರೋಬ್ಬರಿ 28 ಕ್ಷೇತ್ರಗಳಲ್ಲಿ ಜಯಗಳಿಸಿತ್ತು. ಅದೇ ಚುನಾವಣೆಯಲ್ಲಿ ಬಿಜೆಪಿ 31 ಮತ್ತು ಕಾಂಗ್ರೆಸ್ 8 ಕ್ಷೇತ್ರಗಳಲ್ಲಿ ಗೆದ್ದಿದ್ದವು. ಆ ವೇಳೆ ಕಾಂಗ್ರೆಸ್ ಜೊತೆ ಕೈ ಜೋಡಿಸಿದ ಕೇಜ್ರಿವಾಲ್ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದ್ರು. ಆದ್ರೆ ಮೈತ್ರಿ ಮುರಿದುಬಿದ್ದ ಕಾರಣ 2014 ಫೆಬ್ರವರಿ 14 ರಂದು ಕೇಜ್ರಿವಾಲ್ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ರು. ಆ ಬಳಿಕ ದೆಹಲಿಯಲ್ಲಿ ರಾಷ್ಟçಪತಿ ಆಳ್ವಿಕೆ ಜಾರಿಯಾಗಿತ್ತು.
ನಂತರ 2015 ಜನವರಿ 12 ರಂದು ಚುನಾವಣಾ ಆಯೋಗ ದೆಹಲಿಯಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಘೋಷಿಸಿತ್ತು. ಫೆಬ್ರವರಿ 7 ರಂದು ಮತದಾನ, 10 ರಂದು ಫಲಿತಾಂಶ ಎಂದು ಆಯೋಗ ಘೋಷಿಸುತ್ತಿದ್ದಂತೆ ಆಪ್ ವಕ್ತಾರೊಬ್ಬರು, ‘ಒಂದು ವೇಳೆ ನಮ್ಮ ಪಕ್ಷ ಅಧಿಕಾರ ಪಡೆದರೆ, ಅರವಿಂದ್ ಕೇಜ್ರಿವಾಲ್ ಫೆಬ್ರವರಿ 14 ರಂದು ಪ್ರಮಾಣವಚನ ಸ್ವೀಕರಿಸಿ ದೆಹಲಿ ಜನತೆಯೊಂದಿಗೆ ಪ್ರೇಮಿಗಳ ದಿನ ಆಚರಿಸುತ್ತಾರೆ’ ಎಂದು ಘೋಷಣೆ ಮಾಡಿದ್ರು.
ವಿಶೇಷ ಎಂದರೆ 2015 ರ ಚುನಾವಣೆಯಲ್ಲಿ 70 ಸ್ಥಾನಗಳ ಪೈಕಿ 67 ಕ್ಷೇತ್ರಗಳಲ್ಲಿ ಆಪ್ ಗೆದ್ದು ಬೀಗಿತು. ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಪ್ರಮಾಣವಚನ ಸ್ವೀಕಾರಕ್ಕೆ ತಯಾರಿ ಶುರುಮಾಡಿದ ಕೇಜ್ರಿವಾಲ್ ಫೆಬ್ರವರಿ 14 ರಂದು ರಾಮ್ ಲೀಲಾ ಮೈದಾನದಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಅದರಂತೆ ಈ ಬಾರಿಯೂ ಫೆಬ್ರವರಿ 14ರಂದೇ ಕೇಜ್ರಿವಾಲ್ ಪ್ರಮಾಣಸಚನ ಸ್ವೀಕರಿಸಲಿದ್ದಾರೆ.