ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆ ವಿಚಾರ ಇದೀಗ ರಾಜ್ಯ ರಾಜಕಾರಣದಲ್ಲಿ ತೀವ್ರ ವಾಗ್ವಾದಕ್ಕೆ ಕಾರಣವಾಗಿದೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಹಿರಿಯ ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್, ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ನಾಗೇಂದ್ರ ಅವರಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ಪಡೆಯುವಂತೆ ಮಾಡಿರುವುದು “ಬಿಜೆಪಿಯ ಕುತಂತ್ರ ಮತ್ತು ಯೋಜಿತ ಷಡ್ಯಂತ್ರ” ಎಂದು ಆರೋಪಿಸಿದ್ದಾರೆ.
‘ನಾಯಕ ಸಮುದಾಯದ ನಾಯಕನನ್ನು ಗುರಿಯಾಗಿಸಲಾಗಿದೆ’
ಬಿ. ನಾಗೇಂದ್ರ ಅವರ ಮೇಲಿನ ಅಕ್ರಮ ವರ್ಗಾವಣೆ ಆರೋಪಗಳಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಹರಿಪ್ರಸಾದ್ ಪ್ರತಿಪಾದಿಸಿದ್ದಾರೆ.ಶೋಷಿತ ನಾಯಕ ಸಮುದಾಯದಿಂದ ಬೆಳೆದು ಬಂದಿರುವ ಪ್ರಭಾವಿ ನಾಯಕನ ರಾಜಕೀಯ ವರ್ಚಸ್ಸಿಗೆ ಧಕ್ಕೆ ತರಲು ಬಿಜೆಪಿ ಈ ತಂತ್ರ ರೂಪಿಸಿದೆ ಎಂದು ಆರೋಪಿಸಿದ ಅವರು, ರಾಜಕೀಯ ಲಾಭಕ್ಕಾಗಿ ವ್ಯಕ್ತಿಯೊಬ್ಬರ ತೇಜೋವಧೆ ಮಾಡುವುದು ಪ್ರಜಾಪ್ರಭುತ್ವಕ್ಕೆ ಕಪ್ಪುಚುಕ್ಕೆ ಎಂದು ಟೀಕಿಸಿದ್ದಾರೆ.
‘ಬಿಜೆಪಿ ನಾಯಕರಿಗೆ ಪಾದಯಾತ್ರೆಯಿಂದ ಕೆಲಸ ಸಿಕ್ಕಂತಾಗುತ್ತದೆ’
ವಾಲ್ಮೀಕಿ ನಿಗಮದ ಅಕ್ರಮವನ್ನು ಖಂಡಿಸಿ ಬಿಜೆಪಿ ಹಮ್ಮಿಕೊಳ್ಳಲು ಉದ್ದೇಶಿಸಿರುವ ಪ್ರತಿಭಟನಾ ಪಾದಯಾತ್ರೆಯನ್ನೂ ಬಿ.ಕೆ. ಹರಿಪ್ರಸಾದ್ ವ್ಯಂಗ್ಯವಾಡಿದ್ದಾರೆ.ಅಧಿಕಾರ ಕಳೆದುಕೊಂಡು ನಿರುದ್ಯೋಗಿಗಳಾಗಿರುವ ಬಿಜೆಪಿ ನಾಯಕರಿಗೆ ಈ ಪಾದಯಾತ್ರೆಯಿಂದ ಸ್ವಲ್ಪ ಕೆಲಸ ಸಿಕ್ಕಂತಾಗುತ್ತದೆ. ಕನಿಷ್ಠ ಅವರ ದೇಹದ ಆರೋಗ್ಯಕ್ಕಾದರೂ ಇದು ಒಳ್ಳೆಯದು. ಜೊತೆಗೆ ಅವರಿಗೆ ಹೊಸ ಶಕ್ತಿಯೂ ಸಿಗುತ್ತದೆ ಎಂದು ಲೇವಡಿ ಮಾಡಿದ್ದಾರೆ.
ಬಿ. ನಾಗೇಂದ್ರ ವಿರುದ್ಧದ ಪ್ರಕರಣದ ತನಿಖೆ ಹಾಗೂ ರಾಜಕೀಯ ಆರೋಪ-ಪ್ರತ್ಯಾರೋಪಗಳ ನಡುವೆ ವಾಲ್ಮೀಕಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣ ರಾಜ್ಯ ರಾಜಕೀಯದಲ್ಲಿ ಮತ್ತೆ ಕೇಂದ್ರಬಿಂದುವಾಗಿದೆ.







