ಬೆಂಗಳೂರು: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ (Karnataka Maharshi Valmiki Scheduled Tribe Development Corporation Ltd) ಹಣವನ್ನು 2024ರ ಲೋಕಸಭೆ ಚುನಾವಣೆಯಲ್ಲಿ (Lok Sabha Election) ಸ್ಪರ್ಧಿಸಿದ ಬಳ್ಳಾರಿ ಅಭ್ಯರ್ಥಿಯ ಖರ್ಚು ಹಾಗೂ ಬಿ.ನಾಗೇಂದ್ರ (B Nagendra) ಅವರ ವೈಯಕ್ತಿಕ ವೆಚ್ಚಕ್ಕೆ ಬಳಸಲಾಗಿದೆ ಎಂದು ಇಡಿ ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ.
ವಾಲ್ಮೀಕಿ ನಿಗಮದಲ್ಲಿ ನಡೆದಿದೆ ಎನ್ನಲಾದ 187 ಕೋಟಿ ರೂ. ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ್ದ ಇಡಿ ಬುಧವಾರ ಬೆಂಗಳೂರಿನ ಜನಪ್ರತಿನಿಗಳ ವಿಶೇಷ ನ್ಯಾಯಾಲಯಕ್ಕೆ 24 ಜನ ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದೆ.
ನಾಗೇಂದ್ರ ಮಾಸ್ಟರ್ ಮೈಂಡ್ ಎಂದು ಇಡಿ ಉಲ್ಲೇಖಿಸಿದೆ. ಸತ್ಯನಾರಾಯಣ ವರ್ಮಾ, ಪದ್ಮನಾಭ, ನಾಗೇಶ್ ರಾವ್, ನೆಕ್ಕಂಟಿ ನಾಗರಾಜ್, ವಿಜಯ್ ಕುಮಾರ್ ಸೇರಿದಂತೆ 24 ಜನರ ವಿರುದ್ಧ ಚಾರ್ಜ್ ಶೀಟ್ ನ್ನು ಇಡಿ ಸಲ್ಲಿಕೆ ಮಾಡಿದ್ದು, ಆರೋಪಿಗಳಿಗೆ ಆತಂಕ ಶುರುವಾಗಿದೆ.
ಕರ್ನಾಟಕ ಪೊಲೀಸ್ ಮತ್ತು ಸಿಬಿಐ ದಾಖಲಿಸಿದ ಎಫ್ಐಆರ್ಗಳ ಆಧಾರದ ಮೇಲೆ ಇಡಿ ತನಿಖೆಯನ್ನು ಪ್ರಾರಂಭಿಸಿತು. ಬಿ.ನಾಗೇಂದ್ರ ಅವರು ತಮ್ಮ ಪ್ರಭಾವ ಬಳಸಿ ಖಾತೆಯನ್ನು ಯಾವುದೇ ಸೂಕ್ತ ಅನುಮತಿಯಿಲ್ಲದೆ ಬೆಂಗಳೂರಿನಎಂಜಿ ರಸ್ತೆ ಶಾಖೆಗೆ ವರ್ಗಾಯಿಸಿದ್ದಾರೆ. 187 ಕೋಟಿ ರೂ. ಗಂಗಾ ಕಲ್ಯಾಣ ಯೋಜನೆಯಡಿ ರಾಜ್ಯ ಖಜಾನೆಯಿಂದ 43.33 ಕೋಟಿ ರೂ.ಗಳನ್ನು ಸರಿಯಾದ ಕಾರ್ಯವಿಧಾನಗಳನ್ನು ಅನುಸರಿಸದೆ ಹಾಗೂ ಮಾರ್ಗಸೂಚಿ ಉಲ್ಲಂಘಿಸಿ ಠೇವಣಿ ಮಾಡಲಾಗಿದೆ ಎಂದು ಆರೋಪಿಸಿದೆ.