ಹಾವೇರಿ : ವರದಾ ನದಿ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದ ಯುವಕನ ಮೃತದೇಹ ಸತತ ಕಾರ್ಯಾಚರಣೆಯ ಬಳಿಕ ಇಂದು ಪತ್ತೆಯಾಗಿದೆ. ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಸೋಮಾಪುರ ಗ್ರಾಮದ ನದಿ ದಡದಲ್ಲಿ ಶವ ಪತ್ತೆಯಾಗಿದೆ. ಇನಾಂಲಕಮಾಪುರ ಗ್ರಾಮದ 25 ವರ್ಷದ ಚಂದ್ರಶೇಖರ್ ದಳವಾಯಿ ಮೃತದುರ್ದೈವಿಯಾಗಿದ್ದಾನೆ.
ಇದೇ ತಿಂಗಳ 08 ರಂದು ಸಂಜೆ ಗ್ರಾಮದ ಬಳಿಯ ವರದಾ ನದಿಗೆ ಎಮ್ಮೆಗಳ ರಕ್ಷಣೆಗೆಂದು ಇಳಿದಿದ್ದ ಯುವಕ ನಡುಗಡ್ಡೆಯಲ್ಲಿ ಸಿಲುಕಿ ನೀರಿನಲ್ಲಿ ಕೊಚ್ಚಿಹೋಗಿದ್ದ ಯುವಕ ಇಂದು ಶವವಾಗಿ ಪತ್ತೆಯಾಗಿದ್ದಾನೆ. ದುರಂತ ಎಂದರೆ ಈ ಯುವಕ ಕಳೆದ ಮೂರು ತಿಂಗಳ ಹಿಂದಷ್ಟೇ ವೈವಾಹಿತ ಜೀವನಕ್ಕೆ ಕಾಲಿಟ್ಟಿದ್ದ. ಇನ್ನೂ ಯುವಕನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.









