ಕರ್ನಾಟಕ ಸರ್ಕಾರ ಬಿಡುಗಡೆ ಮಾಡಿರುವ ಕೋವಿಡ್ -19 ಅಂಕಿಅಂಶಗಳಲ್ಲಿ ವ್ಯತ್ಯಾಸ
ಬೆಂಗಳೂರು, ಸೆಪ್ಟೆಂಬರ್07: ಕೊರೋನಾ ಸಾಂಕ್ರಾಮಿಕ ಪರಿಸ್ಥಿತಿಯ ಪ್ರಸ್ತುತ ಮಾಹಿತಿಯು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದಲ್ಲಿ (ಎನ್‌ಡಿಎಂಎ) ಲಭ್ಯವಿದ್ದರೂ, ಕರ್ನಾಟಕ ಸರ್ಕಾರ ಬಿಡುಗಡೆ ಮಾಡಿರುವ ಕೋವಿಡ್ -19 ಕ್ಯಾಸೆಲೋಡ್‌ನ ಮಾಹಿತಿಯು 72 ಗಂಟೆಗಳಷ್ಟು ಹಳೆಯದಾಗಿದೆ ಎಂದು ವರದಿಗಳು ತಿಳಿಸಿವೆ.
ಜನರಲ್ಲಿ ಅನಗತ್ಯ ಭೀತಿ ಸೃಷ್ಟಿಸುವುದನ್ನು ತಪ್ಪಿಸಲು ಇದನ್ನು ಮಾಡಲಾಗುತ್ತಿದೆ ಎಂದು ಆರೋಗ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಎನ್‌ಡಿಎಂಎ ಪ್ರಕಾರ, ಶನಿವಾರ ಮುಂಜಾನೆ 5.30 ರ ವೇಳೆಗೆ ರಾಜ್ಯದಲ್ಲಿ 3,99,656 ಕೋವಿಡ್ -19 ಪ್ರಕರಣಗಳು ದೃಢ ಪಟ್ಟಿದೆ. ಆದಾಗ್ಯೂ, ಶನಿವಾರ ಸಂಜೆ ರಾಜ್ಯದ ಕೋವಿಡ್ -19 ಬುಲೆಟಿನ್ 3,89,232 ಅಂಕಿಅಂಶವನ್ನು ತೋರಿಸಿದೆ. ಇದು ಎನ್‌ಡಿಎಂಎ ಅಂಕಿ ಅಂಶಕ್ಕಿಂತ 10,424 ಕಡಿಮೆ ಪ್ರಕರಣಗಳನ್ನು ತೋರಿಸಿದೆ. ಬೆಂಗಳೂರು ನಗರದಲ್ಲಿ, ಶುಕ್ರವಾರದವರೆಗೆ ಬಹಿರಂಗಪಡಿಸಿದ ಒಟ್ಟು ಪ್ರಕರಣಗಳ ಸಂಖ್ಯೆ 1,41,664. ಆದರೆ ಎನ್‌ಡಿಎಂಎ ಅಂಕಿಅಂಶಗಳು1,45,246 ಎಂದು ಸೂಚಿಸಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ.ಅರುಂದತಿ ಚಂದ್ರಶೇಖರ್, ಎನ್‌ಡಿಎಂಎಯ ಕರ್ನಾಟಕ ಅಂಕಿಅಂಶಗಳು ನಿಖರವೆಂದು ಒಪ್ಪಿಕೊಂಡಿದ್ದು, ಅವು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ನಿರ್ವಹಿಸುತ್ತಿರುವ ಕೋವಿಡ್ -19 ಪೋರ್ಟಲ್‌ನಿಂದ ಬಂದಿರುವ ವರದಿಯಾಗಿದೆ ಎಂದು ಹೇಳಿದ್ದಾರೆ.
ದೈನಂದಿನ ಮಾಧ್ಯಮ ಬುಲೆಟಿನ್ ನಲ್ಲಿ ಪ್ರಕಟವಾದ ಅಂಕಿ ಅಂಶಗಳಲ್ಲಿನ ವ್ಯತ್ಯಾಸಕ್ಕೆ ಕಾರಣ ನಾವು ಬುಲೆಟಿನ್ ಅನ್ನು ಬೆಳಿಗ್ಗೆ 7 ರಿಂದ ಮಧ್ಯಾಹ್ನ 3 ರವರೆಗೆ ಮಾತ್ರ ನವೀಕರಿಸುತ್ತೇವೆ. ಅದರ ನಂತರದ ಯಾವುದೇ ಪ್ರಕರಣಗಳನ್ನು ನವೀಕರಿಸುವುದಿಲ್ಲ ಎಂದು ಡಾ.ಅರುಂದತಿ ಹೇಳಿದ್ದಾರೆ.
ಆಗಸ್ಟ್ 19 ರಂದು ಬೆಂಗಳೂರಿನಲ್ಲಿ ಕೋವಿಡ್ ಪ್ರಕರಣಗಳು ಒಂದು ಲಕ್ಷ ದಾಟಿದ್ದರೂ, ಇದನ್ನು ಎರಡು ದಿನಗಳ ನಂತರ ಆಗಸ್ಟ್ 21 ರಂದು ಸಾರ್ವಜನಿಕವಾಗಿ ಪ್ರಕಟಿಸಲಾಗಿದೆ ಎಂದು ಬಿಬಿಎಂಪಿ ಮೂಲವೊಂದು ತಿಳಿಸಿದೆ.