ಪಾಪಗಳನ್ನು ಕಳೆಯುವ ಪಾಪನಾಶಂ ಬೀಚ್..! ಕೇರಳದ ವರ್ಕಲಾ ಬೀಚ್ – ಇಂಟರೆಸ್ಟಿಂಗ್ ಫ್ಯಾಕ್ಟ್ಸ್
ದಕ್ಷಿಣ ಭಾರತದ ಕೆಲವು ಬೀಚುಗಳು ಎಲೆಮರಿಕಾಯಿಯಂತಿವೆ. ಹೆಚ್ಚು ಪ್ರಸಿದ್ಧಿಗೆ ಬರದೇ ತನ್ನಲ್ಲಿ ಅಪಾರ ಸೌಂದರ್ಯವನ್ನು ಹಿಡಿದಿಟ್ಟುಕೊಂಡ ಬೀಚುಗಳಲ್ಲಿ ಕೇರಳದ ವರ್ಕಲಾ ಬೀಚ್ ಸಹ ಒಂದು. ಕೇರಳದ ರಾಜಧಾನಿ ತಿರುವನಂತಪುರಂ ದಿಂದ ೫೦ ಕಿಮೀ ದೂರದಲ್ಲಿರುವ ವರ್ಕಲಾ ಸಣ್ಣ ಹಳ್ಳಿ.
ಪಾಪಗಳನ್ನು ಕಳೆಯುವ ಪಾಪನಾಶಂ ಬೀಚ್..!
ವರ್ಕಲಾ ಹಲವಕ್ಕೆ ಪ್ರಸಿದ್ಧಿ ಪಡೆದಿದೆ. ಸುಂದರ ಸಮುದ್ರ ತೀರ, 2000 ವರ್ಷಗಳಷ್ಟು ಹಳೆಯ ವಿಷ್ಣು ದೇವಸ್ಥಾನ ಮತ್ತು ಬೀಚ್‌ನಿಂದ ಸ್ವಲ್ಪವೇ ದೂರದಲ್ಲಿ ಇರುವ ಶಿವಗಿರಿ ಮಠ ಪ್ರವಾಸಿಗರ ಪ್ರಮುಖ ಆಕರ್ಷಣೆ. ವರ್ಕಲಾದಿಂದ ಹತ್ತು ಕಿಲೋ ಮೀಟರ್‌ಗಳಷ್ಟು ದೂರದಲ್ಲಿನ ಪಾಪನಾಶಂ ಬೀಚ್ ಪಾಪ ಕಳೆಯುವ ಸಮುದ್ರ ತೀರವೆಂತಲೇ ಪ್ರಸಿದ್ಧಿ. ಈ ಬೀಚ್‌ನ ಪವಿತ್ರವಾದ ನೀರಿನಲ್ಲಿ ಒಮ್ಮೆ ಮುಳುಗು ಹಾಕಿದರೆ ದೇಹದಲ್ಲಿನ ಎಲ್ಲಾ ಅಶುದ್ಧತೆಗಳನ್ನು ಮತ್ತು ಎಲ್ಲಾ ಪಾಪಗಳ ಆತ್ಮವನ್ನು ಶುದ್ಧಗೊಳಿಸುತ್ತದೆ ಎಂದು ನಂಬಲಾಗುತ್ತದೆ. ಇದರಿಂದ ಇದಕ್ಕೆ ಪಾಪನಾಶಂ ಬೀಚ್ ಎಂದು ಕರೆಯಲಾಗುತ್ತದೆ.
ವರ್ಕಲಾ ಹತ್ತಾರು ದೇವಸ್ಥಾನ, ರಮಣೀಯ ಬೀಚು ಹಾಗೂ ಕೇರಳದಲ್ಲಿಯೇ ಅತೀ ಉದ್ದದ ಲ್ಯಾಟರೈಟ್ ಬಂಡೆಗಳನ್ನು ಹೊಂದಿರುವ ಜಾಗವಾಗಿದೆ. ಈ ೬೦೦ ಮೀಟರಿನ ಬಂಡೆಯುದ್ದಕ್ಕೂ ನಡೆದರೆ ಒಂದು ಬದಿಯಲ್ಲಿ ಸಮುದ್ರ ತೀರ ಹಾಗೂ ಇನ್ನೊಂದು ಬದಿಯಲ್ಲಿ ಲೆಕ್ಕಕ್ಕೇ ಸಿಗದಷ್ಟು ಸ್ಪಾ, ರೆಸ್ಟೋರೆಂಟ್, ಹೊಟೇಲು ಮತ್ತು ಗಿಫ್ಟ್ ಶಾಪುಗಳನ್ನು ದೊರೆಯುತ್ತದೆ.
ಜನಾರ್ದನ ಸ್ವಾಮಿ ದೇವಸ್ಥಾನ ವರ್ಕಲಾದ ಮತ್ತೊಂದು ವಿಶೇಷತೆ. ಈ ದೇವಸ್ಥಾನಕ್ಕೆ ಸುಮಾರು ೨೦೦೦ ವರ್ಷಗಳ ಇತಿಹಾಸವಿದೆ. ವಿಷ್ಣುವಿನ ಹಲವು ನಾಮಗಳಲ್ಲಿ ಒಂದಾದ ಜನಾರ್ಧನ ಎಂಬ ಹೆಸರಿನಿಂದ ಇಲ್ಲಿ ಅವನನ್ನು ಆರಾಧಿಸಲಾಗುತ್ತದೆ. ಈ ದೇವಾಲಯವನ್ನು ತಲುಪಲು ಮೆಟ್ಟಿಲುಗಳನ್ನು ಏರಿ ಹೋಗಬೇಕು.
ವರ್ಕಲಾ ಮತ್ತು ಪರವೂರ್ ರಸ್ತೆಯ ಗಡಿ ಭಾಗದಲ್ಲಿರುವ ಕಪ್ಪಿಲ ಬೀಚ್ ಒಂದು ಭಾಗದಲ್ಲಿ ಬೀಚ್ ಮತ್ತು ಇನ್ನೊಂದು ಭಾಗದಲ್ಲಿ ನದಿಯಾಗಿದೆ. ಮಳೆಗಾಲದಲ್ಲಿ ಇವೆರಡೂ ಒಂದಾಗಿ ಹರಿಯುತ್ತವೆ. ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಇರುವುದಿಲ್ಲ. ಹೀಗಾಗಿ ಸೂರ್ಯಾಸ್ತದ ಸೊಬಗನ್ನು ಸವಿಯಲು ಉತ್ತಮ ಸ್ಥಳವಾಗಿದೆ. ಇನ್ನು ಇಲ್ಲಿಂದ ಕೆಲವೇ ಕಿಮೀಗಳ ದೂರದಲ್ಲಿರುವ ಪರೂರಿನ ಪೂತಕುಲಮ್ ಎಂಬಲ್ಲಿ ಆನೆ ಕೊಟ್ಟಿಲ್ ಇದೆ. ಮೊದಲ ಬಾರಿಗೆ ಸಾಕು ಆನೆಗಳಿಗೆ ಜನಿಸಿದ ಶಿವನ್ ಕುಟ್ಟಿ ಹುಟ್ಟಿದ ಮೇಲೆ ಈ ಸ್ಥಳ ಗುರುತಿಸಲ್ಪಟ್ಟಿತು. ನೀವು ಇಲ್ಲಿ ಆನೆಗಳೊಂದಿಗೆ ಫೋಟೋ, ಸೆಲ್ಫಿ ತೆಗೆದುಕೊಳ್ಳಬಹುದು.
ವರ್ಕಾಲವು ಪ್ರವಾಸಿಗರಿಗೆ ಅತ್ಯುತ್ತಮ ಸೌಕರ್ಯಗಳನ್ನುಒದಗಿಸುತ್ತಿದೆ. ಮತ್ತು ಸೀ ಫುಡ್ ಪ್ರಿಯರಿಗೆ ಇದು ಅಚ್ಚುಮೆಚ್ಚಿನ ತಾಣವಾಗುವುದರಲ್ಲಿ ಸಂದೇಹವೇ ಇಲ್ಲ.
ಅಕ್ಟೋಬರ್‌ನಿಂದ ಮಾರ್ಚ್‌ವರೆಗಿನ ಅವಧಿಯಲ್ಲಿ ಭೇಟಿ ನೀಡುವುದು ಉತ್ತಮ. ತಿರುವನಂತಪುರಂ ನಿಂದ ಇಲ್ಲಿಗೆ ರಸ್ತೆ ಮಾರ್ಗವಾಗಿ ತಲುಪಲು ಸಾಕಷ್ಟು ಆಯ್ಕೆಗಳಿವೆ.