ಯಾದಗಿರಿ: ತಡರಾತ್ರಿ ಸುರಿದ ಭಾರಿ ಮಳೆಗೆ ಯಾದಗಿರಿ ಜಿಲ್ಲೆಯ ಶಹಾಪುರ ನಗರ ಜಲಾವೃತಗೊಂಡಿದೆ. ಶಹಾಪುರದ ಬೀದರ್-ಶ್ರೀರಂಗಪಟ್ಟಣ ರಾಜ್ಯ ಹೆದ್ದಾರಿ ಹಾಗೂ ರಸ್ತೆ ಪಕ್ಕದಲ್ಲಿರುವ ಅಂಗಡಿಗಳಲ್ಲಿ ಮಳೆ ನೀರು ನುಗ್ಗಿದೆ.
ಹೆದ್ದಾರಿ ಜಲಾವೃತಗೊಂಡ ಪರಿಣಾಮ ವಾಹನ ಸಂಚಾರ ಮಾಡಲು ಪರದಾಡುವಂತಾಗಿದೆ. ತಗ್ಗು ಪ್ರದೇಶಗಳಲ್ಲಿ ಭಾರಿ ನೀರು ಹರಿಯುತ್ತಿದ್ದು ಬೈಕ್, ಕಾರುಗಳು ನೀರಿನಲ್ಲಿ ಸಿಲುಕಿಕೊಂಡಿವೆ.
ಬಸವೇಶ್ವರ ವೃತ್ತದ ಸಮೀಪ ಹಾಗೂ ಬಾಪುಗೌಡ ನಗರದ ಕೆಲ ಕಡೆ ೨೫ ಕ್ಕು ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಸಗರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ಜಲಾವೃತಗೊಂಡಿದೆ. ಹಯ್ಯಾಳ.ಬಿ ಸೇತುವೆ ಮಳೆ ನೀರಿಗೆ ಜಲಾವೃತಗೊಂಡಿದೆ. ಅದೇ ರೀತಿ ಶಹಾಪುರ ನಗರದ ಹಳಿಸಗರದಿಂದ ಕೋರ್ಟ್ ಗೆ ತೆರಳುವ ರಸ್ತೆ ಸಂಪೂರ್ಣ ಜಲಾವೃತಗೊಂಡಿದೆ. ರೈತರು ಸಾಲಸೋಲ ಮಾಡಿ ಬಿತ್ತನೆ ಮಾಡಿದ ಬೆಳೆ ನೀರು ಪಾಲಾಗಿದೆ. ಮೊಳಕೆಯೊಡೆದ ಹೆಸರು, ತೊಗರಿ, ಹತ್ತಿ ಬೆಳೆ ಮಳೆ ನೀರಿಗೆ ಹಾನಿಯಾಗಿದೆ. ನಗರಸಭೆ ವ್ಯಾಪ್ತಿಯ ಚರಂಡಿಗಳನ್ನು ಸ್ವಚ್ಛ ಮಾಡದೇ ಇರುವುದೇ ಅವಾಂತರಕ್ಕೆ ಕಾರಣ ಎಂದು ಶಹಾಪುರ ನಗರದ ಜನ ಆಕ್ರೋಶಗೊಂಡಿದ್ದಾರೆ.