Vedha : ಒಟಿಟಿಯಲ್ಲೂ ದಾಖಲೆ ಬರೆದ ಶಿವಣ್ಣ ‘ವೇದ’
ಶಿವರಾಜ್ ಕುಮಾರ್ ಅಭಿನಯದ ಸೂಪರ್ ಹಿಟ್ ಸಿನಿಮಾ ‘ವೇದ’ ಫೆಬ್ರವರಿ 10ರಂದು ZEE5 ಒಟಿಟಿಗೆ ಎಂಟ್ರಿ ಕೊಟ್ಟಿತ್ತು. ಹ್ಯಾಟ್ರಿಕ್ ಹೀರೋ ಸಿನಿ ಕೆರಿಯರ್ ನ ವಿಶೇಷ ಸಿನಿಮಾಗಳಲ್ಲೊಂದಾದ ಈ ಚಿತ್ರ ಪ್ರೇಕ್ಷಕರ ಮನಗೆದ್ದು ಬಾಕ್ಸ್ ಆಫೀಸ್ ನಲ್ಲಿ ಕಮಾಲ್ ಮಾಡಿದೆ. ಶಿವಣ್ಣ ಸಿನಿ ಕೆರಿಯರ್ ನ 125ನೇ ಸಿನಿಮಾ ಹಾಗೂ ಗೀತಾ ಶಿವಕುಮಾರ್ ನಿರ್ಮಾಣದ ಮೊದಲ ಚಿತ್ರವಾಗಿರುವ ‘ವೇದ’ ಒಟಿಟಿಯಲ್ಲೂ ದಾಖಲೆ ಬರೆದಿದೆ.
‘ವೇದ’ ಸಿನಿಮಾ ನಿರ್ದೇಶಕ ಎ.ಹರ್ಷ ಹಾಗೂ ಶಿವಣ್ಣ ಕಾಂಬಿನೇಶನ್ ನಲ್ಲಿ ಮೂಡಿ ಬಂದ ನಾಲ್ಕನೇ ಸಿನಿಮಾ. ಸಾಕಷ್ಟು ನಿರೀಕ್ಷೆಯೊಂದಿಗೆ ಡಿಸೆಂಬರ್ 23ರಂದು ಚಿತ್ರಮಂದಿರಕ್ಕೆ ಎಂಟ್ರಿ ಕೊಟ್ಟಿದ್ದ ಈ ಚಿತ್ರ ಅಭೂತಪೂರ್ವ ರೆಸ್ಪಾನ್ಸ್ ಪಡೆದುಕೊಂಡಿತ್ತು. ದೊಡ್ಮನೆ ಅಭಿಮಾನಿ ಬಳಗ ಹಾಗೂ ಸಿನಿ ಪ್ರೇಕ್ಷಕರ ಮನಗೆದ್ದ ಚಿತ್ರ ಸೂಪರ್ ಸಕ್ಸಸ್ ಕಂಡಿತ್ತು. ಫೆಬ್ರವರಿ 10ರಂದು ಜನಪ್ರಿಯ ಒಟಿಟಿ ಪ್ಲಾಟ್ ಫಾರ್ಮ್ ZEE5ನಲ್ಲಿ ವೇದ ಸಿನಿಮಾ ಬಿಡುಗಡೆಗೊಂಡಿತ್ತು. ಬಿಡುಗಡೆಯಾದ ಒಂದು ವಾರದೊಳಗೆ ಸಿನಿಮಾ 100 ಮಿಲಿಯನ್ ಗೂ ಅಧಿಕ ಸ್ಟ್ರೀಮಿಂಗ್ ಕಂಡು ದಾಖಲೆ ಬರೆದಿದೆ.
ಗಾನವಿ ಲಕ್ಷ್ಮಣ್, ಶ್ವೇತ ಚೆಂಗಪ್ಪ, ಉಮಾಶ್ರೀ, ಅದಿತಿ ಸಾಗರ್, ವೀಣಾ ಪೊನ್ನಪ್ಪ, ಕುರಿ ಪ್ರತಾಪ್, ಲಾಸ್ಯ ನಾಗರಾಜ್ ಸೇರಿದಂತೆ ಬಹುದೊಡ್ಡ ತಾರಗಣ ‘ವೇದ’ ಚಿತ್ರದಲ್ಲಿದೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನದಲ್ಲಿ ಚಿತ್ರದ ಹಾಡುಗಳು ಮೋಡಿ ಮಾಡಿದ್ದು, ಸ್ವಾಮಿ ಜೆ ಗೌಡ ಛಾಯಾಗ್ರಹಣ, ದೀಪು.ಎಸ್. ಕುಮಾರ್ ಸಂಕಲನ ಚಿತ್ರಕ್ಕಿದೆ.
ZEE5 ಅತ್ಯಂತ ವಿಶ್ವಾಸಾರ್ಹ ಒಟಿಟಿ ಪ್ಲಾಟ್ ಫಾರ್ಮ್ ಆಗಿದ್ದು, ಪ್ರೇಕ್ಷಕರ ಅಭಿರುಚಿಗೆ ತಕ್ಕಂತ ಸಿನಿಮಾಗಳನ್ನು ನೀಡುತ್ತಾ ಬರುತ್ತಿದೆ. ‘ವಿಕ್ರಾಂತ್ ರೋಣ’, ‘ಗಾಳಿಪಟ-2’, ‘ಗುರು ಶಿಷ್ಯರು’ ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳು ZEE 5ನಲ್ಲಿ ಬಿಡುಗಡೆಯಾಗಿ ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿಕೊಂಡಿವೆ. ಕಡಿಮೆ ಅವಧಿಯಲ್ಲಿ ಹೆಚ್ಚಿನ ವೀಕ್ಷಣೆ ಕಂಡು ಹೊಸ ದಾಖಲೆ ಕೂಡ ಬರೆದಿದೆ. ಇದೀಗ ‘ವೇದ’ ಸಿನಿಮಾ ಕೂಡ ZEE5ನಲ್ಲಿ ಹೊಸ ದಾಖಲೆ ಬರೆದು ಎಲ್ಲರ ಗಮನ ಸೆಳೆದಿದೆ.
Vedha , ott , zee5 , saakshatv , film updates