ಬೆಂಗಳೂರು : ವಿಧಾನಸಭೆಯಲ್ಲಿಂದು ಅಸ್ಪೃಶ್ಯತೆ ವಿಚಾರ ಪ್ರತಿಧ್ವನಿಸಿ ಗಂಭೀರ ಚರ್ಚೆಗೆ ಎಡೆ ಮಾಡಿಕೊಟ್ಟಿತು. ಭಾರತದ ಸಂವಿಧಾನ ಕುರಿತ ವಿಶೇಷ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಶಾಸಕ ಎನ್.ಮಹೇಶ್ ಅವರು, ಅಸ್ಪೃಶ್ಯತೆ ಆಚರಣೆ ಕಾನೂನು ಬಾಹಿರವಾಗಿದ್ದರೂ ಶೇ.70ರಷ್ಟು ಹಳ್ಳಿಗಳಲ್ಲಿ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಜೀವಂತವಾಗಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಶಿಕ್ಷೆಯಾಗಿರುವ ಪ್ರಮಾಣ ತೀರಾ ಕಡಿಮೆ ಇದೆ ಎಂದು ಬೇಸರ ವ್ಯಕ್ತಪಡಿಸಿದರು.
ಆಗ ಮಧ್ಯಪ್ರವೇಶಿಸಿದ ಜೆಡಿಎಸ್ ಶಾಸಕ ಶ್ರೀನಿವಾಸಗೌಡ, ತಾವು ಶಾಲೆಯಲ್ಲಿ ಓದುತ್ತಿದ್ದ ಸಂದರ್ಭದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ತಮ್ಮ ಸ್ನೇಹಿತನ ಮನೆಯಲ್ಲಿ ಊಟ ಮಾಡಿದ ವಿಚಾರವನ್ನು ಪ್ರಸ್ತಾಪಿಸಿ, ಜಾತಿ ವ್ಯವಸ್ಥೆ ಜೀವಂತವಾಗಿರುವುದಕ್ಕೆ ನಾವೆಲ್ಲ ತಲೆ ತಗ್ಗಿಸಬೇಕು ಎಂದರು.
ಈ ವೇಳೆ ಎದ್ದು ನಿಂತ ಕಾಂಗ್ರೆಸ್ ಶಾಸಕ ಡಾ.ರಂಗನಾಥ್, ತಾವು ವೈದ್ಯರಾಗಿದ್ದು, ಶಸ್ತ್ರ ಚಿಕಿತ್ಸೆ ಸಂದರ್ಭದಲ್ಲಿ ಜಾತಿ ನೋಡುವುದಿಲ್ಲ. ರಕ್ತ ಬಳಸುವಾಗ ಜಾತಿ ನೋಡುವುದಿಲ್ಲ. ಯುವ ಸಮುದಾಯದಲ್ಲಿ ಜಾತಿ ಧರ್ಮ ಯಾರೂ ಕೇಳುತ್ತಿಲ್ಲ. ನಮ್ಮಲ್ಲಿ ಬದಲಾವಣೆಯಾಗಬೇಕು, ದೌರ್ಜನ್ಯ ಪ್ರಕರಣಗಳ ಪರಿಶೀಲನೆಯೂ ಆಗಬೇಕು ಎಂದರು.
ಇದಕ್ಕೆ ಆಕ್ಷೇಪವೆಂಬಂತೆ ಮಾತನಾಡಿದ ಶಾಸಕ ಡಾ.ಅನ್ನದಾನಿ, ಮೆಡಿಕಲ್ ಕಾಲೇಜ್ ವೊಂದರಲ್ಲಿ ನನ್ನ ಮಗ ಎಂಬಿಬಿಎಸ್ ವಿದ್ಯಾಭ್ಯಾಸ ಮಾಡುತ್ತಿದ್ದಾನೆ. ಜೊತೆಯಲ್ಲೇ ಕುಳಿತು ಕಾಫಿ ತಿಂಡಿ ತಿನ್ನುತ್ತಿದ್ದ ವಿದ್ಯಾರ್ಥಿನಿಯೊಬ್ಬರು ನನ್ನ ಮಗನ ಜಾತಿ ಕೇಳಿದ್ದಾರೆ. ಆತ ಯಾವುದೇ ಕೀಳರಿಮೆ ಇಲ್ಲದೆ ಪರಿಶಿಷ್ಟ ಜಾತಿಗೆ ಸೇರಿದವನು ಎಂದು ಹೇಳಿದ್ದಾನೆ. ಆದಾದ ಮೇಲೆ ನನ್ನ ಮಗನ ಜೊತೆ ಮಾತನಾಡುತ್ತಿದ್ದ ವಿದ್ಯಾರ್ಥಿನಿ ಎದುರಿಗೆ ಸಿಕ್ಕಿದರೂ ಮಾತನಾಡುತ್ತಿಲ್ಲವಂತೆ ಎಂದರು.
ಬಳಿಕ ಜೆಡಿಎಸ್ ಶಾಸಕ ಡಾ.ಶ್ರೀನಿವಾಸ್ ಮೂರ್ತಿ ಮಾತನಾಡಿ, 2008ರಲ್ಲಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದಾಗ ಸೊಂಟ ಮುರಿದುಕೊಂಡಿದ್ದ ವ್ಯಕ್ತಿಗೆ ಹಣ ಖರ್ಚು ಮಾಡಿ ಚಿಕಿತ್ಸೆ ಮಾಡಿಸಿದ್ದೆ. ಆ ವ್ಯಕ್ತಿ ಮನೆಗೆ ಹೋದಾಗ ನಮ್ಮನ್ನು ಸ್ಪರ್ಶ ಸಮುದಾಯಕ್ಕೆ ಸೇರಿದವರಲ್ಲ. ಹಾಗಾಗಿ ಬೇರೆ ಅಭ್ಯರ್ಥಿಗೆ ಮತ ಹಾಕುವುದಾಗಿ ಹೇಳಿದರು ಎಂದು ತಾವು ಅನುಭವಿಸಿದ ನೋವಿನ ಕಥೆಯನ್ನು ಹೇಳಿಕೊಂಡರು. ಈ ವೇಳೆ ಮಾತನಾಡಿದ ಜಿ.ಟಿ.ದೇವೇಗೌಡ, ಸಾಕಷ್ಟು ಸುಧಾರಣೆಯಾಗಿದೆ. ಅಸ್ಪೃಶ್ಯತೆ ನಿವಾರಣೆಯಾಗಿದೆ. ಅಲ್ಲೊಂದು ಇಲ್ಲೊಂದು ಪ್ರಕರಣಗಳಿವೆ. ಅದನ್ನು ಸರಿಪಡಿಸಬೇಕಿದೆ. ಅಸ್ಪೃಶ್ಯತೆ ನಿವಾರಣೆಗೆ ಕಾನೂನಿದೆ ಎಂದರು.
ಆಗ ಮತ್ತೆ ಮಾತನಾಡಿದ ಎನ್. ಮಹೇಶ್ ಅವರು, ಸಮಾಜದಲ್ಲಿ ಬದಲಾವಣೆಯಾಗುತ್ತಿಲ್ಲ ಎಂದು ಹೇಳಿಲ್ಲ. ಆದರೆ ಕೆಲವೆಡೆ ಅಸ್ಪೃಶ್ಯತೆ ಇನ್ನು ಜೀವಂತವಾಗಿದೆ ಎಂಬುದನ್ನು ಗಮನಕ್ಕೆ ತಂದಿದ್ದೇನೆ ಎಂದರು.








