ಕಲಬುರಗಿ: ವಿದ್ಯಾಗಮ ಕಾರ್ಯಕ್ರಮದಡಿ ಸರ್ಕಾರಿ ಶಾಲೆಗಳ ಮಕ್ಕಳಿಗೆ ವಠಾರ ಶಾಲೆಯಲ್ಲಿ ಓದಲು ಹೋಗುತ್ತಿದ್ದ ನಾಲ್ವರು ಮಕ್ಕಳಿಗೆ ಕೊರೊನಾ ಪಾಸಿಟಿವ್ ಬಂದಿರುವ ಘಟನೆ ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ಮಾಶಾಳ ಗ್ರಾಮದಲ್ಲಿ ನಡೆದಿದೆ.
ಕೊರೊನಾ ಹಿನ್ನೆಲೆಯಲ್ಲಿ ಕಳೆದ ಮಾರ್ಚ್‍ನಿಂದ ಸರ್ಕಾರಿ ಶಾಲೆಗಳನ್ನು ಬಂದ್ ಮಾಡಲಾಗಿದೆ. ನಗರ ಹಾಗೂ ಪಟ್ಟಣ ಪ್ರದೇಶದ ಖಾಸಗಿ ಶಾಲೆಗಳ ಮಕ್ಕಳು ಆನ್‍ಲೈನ್ ಮೂಲಕ ಶಿಕ್ಷಣ ಪಡೆಯುತ್ತಿದ್ದಾರೆ. ಆದರೆ, ಸರ್ಕಾರಿ ಶಾಲೆಗಳ, ಅದರಲ್ಲೂ ಗ್ರಾಮೀಣ ಭಾಗದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಕಾರಣಕ್ಕೆ ಸರ್ಕಾರ ಹೈಸ್ಕೂಲ್ ಮಕ್ಕಳಿಗೆ ವಿದ್ಯಾಗಮ ಯೋಜನೆಯಲ್ಲಿ ಶಿಕ್ಷಕರಿಂದ ಪಾಠ-ಪ್ರವಚನ ಮಾಡಿಸುತ್ತಿದೆ.
ಇದೇ ರೀತಿ ಅಫಜಲಪುರ ತಾಲೂಕಿನ ಮಾಶಾಳ ಗ್ರಾಮದ ಸರ್ಕಾರಿ ಶಾಲೆಯಲ್ಲಿ ವಿದ್ಯಾಗಮ ಕಾರ್ಯಕ್ರಮದಡಿ 200 ಮಕ್ಕಳಿಗೆ ವಠಾರ ಶಾಲೆ ಹೆಸರಿನಲ್ಲಿ ಪಾಠ ಪ್ರವಚನ ಮಾಡಲಾಗುತ್ತಿತ್ತು.
ಈ ಶಾಲೆಯ ಹೆಡ್‍ಮಾಸ್ಟರ್‍ಗೆ 20 ದಿನದ ಹಿಂದೆ ಕೊರೊನಾ ಪಾಸಿಟಿವ್ ಬಂದಿತ್ತು. ಈ ಹಿನ್ನೆಲೆಯಲ್ಲಿ ಶಾಲೆಯ ಶಿಕ್ಷಕರು ಹಾಗೂ ಮಕ್ಕಳಿಗೆ ಕೊರೊನಾ ರ್ಯಾಂಡಮ್ ಪರೀಕ್ಷೆ ಮಾಡಲಾಗಿತ್ತು. ರ್ಯಾಂಡಮ್ ಪರೀಕ್ಷೆ ವೇಳೆ ನಾಲ್ವರು ಮಕ್ಕಳಿಗೆ ಕೊರೊನಾ ಪಾಸಿಟಿವ್ ಬಂದಿದೆ.
ಶಾಲೆಯ 20 ಶಿಕ್ಷಕರು ಹಾಗೂ 207 ವಿದ್ಯಾರ್ಥಿಗಳಿಗೆ ಕೋವಿಡ್ ಟೆಸ್ಟ್ ಮಾಡಿದಾಗ ಎಲ್ಲಾ ಶಿಕ್ಷಕರಿಗೆ ನೆಗೆಟಿವ್ ಬಂದಿದ್ದು, 24 ವಿದ್ಯಾರ್ಥಿಗಳ ವರದಿ ಬರಬೇಕಿದೆ.
ಒಂದೇ ಮನೆಯ ಒಬ್ಬರು ಮಕ್ಕಳಿಗೆ ಕೊರೊನಾ ಪಾಸಿಟಿವ್ ಬಂದಿರುವುದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ. ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ವಠಾರ ಶಾಲೆಯನ್ನು ಸೀಲ್‍ಡೌನ್ ಮಾಡಲಾಗಿದೆ. ಗ್ರಾಮಕ್ಕೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ ಎಂದು ಅಫಜಲಪುರ ಬಿಇಒ ಚಿತ್ರಶೇಖರ ದೇಗಲಮಡಿ ಹೇಳಿದ್ದಾರೆ.
40 ವಿದ್ಯಾರ್ಥಿಗಳಿಗೆ ಒಂದರಂತೆ ಮಾಶಾಳ ಗ್ರಾಮದಲ್ಲಿ 19 ವಠಾರ ಶಾಲೆಗಳನ್ನು ಆರಂಭಿಸಲಾಗಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಐದು ವಠಾರ ಶಾಲೆಗಳನ್ನು ಸೀಲ್‍ಡೌನ್ ಮಾಡಲು ಹಿರಿಯ ಅಧಿಕಾರಿಗಳು ಸೂಚನೆ ನೀಡಿದ್ದಾರೆ.