ವಿಜಯ್ ಹಜಾರೆ | ಕರ್ನಾಟಕ ನಾಕೌಟ್ ಗೆ ಅರ್ಹತೆ Vijay Hazare saaksha tv
ವಿಜಯ್ ಹಜಾರೆ ಏಕದಿನ ಕ್ರಿಕೆಟ್ ಟೂರ್ನಿಯ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಬಂಗಾಳ ವಿರುದ್ಧ ಸೋತರೂ ಕರ್ನಾಟಕ ಪ್ರೀ ಕ್ವಾರ್ಟರ್ ಫೈನಲ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿದೆ. ಅಂಕಗಳಿಕೆಯಲ್ಲಿ ಬಂಗಾಳ ಮತ್ತು ಕರ್ನಾಟಕ ತಲಾ 12 ಅಂಕ ಕಲೆ ಹಾಕಿದ್ದು, ರನ್ ಸರಾಸರಿಯಲ್ಲಿ ಮನೀಷ್ ಪಡೆ ಬಲಿಷ್ಠವಾಗಿದ್ದರಿಂದ ನಾಕೌಟ್ ಹಂತಕ್ಕೆ ಪ್ರವೇಶ ಪಡೆಯಿತು. ಇದೇ 19 ರಂದು ಮನೀಷ್ ಬಳಗ ರಾಜಸ್ಥಾನ ವಿರುದ್ಧ ಕಾದಾಟವನ್ನು ನಡೆಸಲಿದೆ.
ತಿರುವನಂತಪುರದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕರ್ನಾಟಕ 50 ಓವರ್ ಗಳಲ್ಲಿ 8 ವಿಕೆಟ್ ಗೆ 252 ರನ್ ಸೇರಿಸಿತು ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಬಂಗಾಳ 48.3 ಓವರ್ ಗಳಲ್ಲಿ 6 ವಿಕೆಟ್ ಗೆ 253 ರನ್ ಸೇರಿಸಿ ಜಯ ಸಾಧಿಸಿತು.
ಟಾಸ್ ಗೆದ್ದ ಕರ್ನಾಟಕ ಮೊದಲು ಬ್ಯಾಟಿಂಗ್ ಮಾಡಲು ಮುಂದಾಯಿತು. ರವಿಕುಮಾರ್ ಸಮರ್ಥ್ (17) ಮತ್ತು ರೋಹನ್ ಕದಂ (37) ಜೋಡಿ ಉತ್ತಮ ಜೊತೆಯಾಟವನ್ನು ಕಾಣಿಕೆ ನೀಡಿತು. ಮಧ್ಯಮ ಕ್ರಮಾಂಕದಲ್ಲಿ ಕೃಷ್ಣಮೂರ್ತಿ ಸಿದ್ಧಾರ್ಥ್ (1) ನಿರಾಸೆ ಅನುಭವಿಸಿದರು.
ನಾಲ್ಕನೇ ವಿಕೆಟ್ ಗೆ ಕರುಣ್ ನಾಯರ್ ಮತ್ತು ನಾಯಕ ಮನೀಷ್ ಪಾಂಡೆ ಜೋಡಿ ತಂಡಕ್ಕೆ ಸೊಗಸಾದ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ ಅರ್ಧಶತಕದ ಜೊತೆಯಾಟವನ್ನು ನೀಡಿ ತಂಡಕ್ಕೆ ಆಸರೆಯಾಯಿತು. ಕರುಣ್ 25 ರನ್ ಗಳಿಸಿ ಔಟ್ ಆದರು. ಶ್ರೀನಿವಾಸ್ ಶರತ ಆಟ 17 ರನ್ ಗಳಿಗೆ ಸೀಮಿತವಾಯಿತು. ಸೊಗಸಾದ ಬ್ಯಾಟಿಂಗ್ ನಡೆಸುತ್ತಿದ್ದ ಮನೀಷ್ ಪಾಂಡೆ 90 ರನ್ ಬಾರಿಸಿ ಮುನ್ನುಗುತ್ತಿದ್ದಾಗ ಪ್ರಮಾಣಿಕ ತೋಡಿದ ಖೆಡ್ಡಾಗೆ ಬಲಿಯಾದರು. ಇವರ ಮನಮೋಹಕ ಇನ್ನಿಂಗ್ಸ್ ನಲ್ಲಿ ನಾಲ್ಕು ಬೌಂಡಿ ಹಾಗೂ ನಾಲ್ಕು ಸಿಕ್ಸರ್ ಸೇರಿವೆ.
ಪ್ರವೀಣ್ ದುಬೆ ಅಜೇಯ 37 ರನ್ ಸಿಡಿಸಿದರು. ಉಳಿದಂತೆ ಯಾವೊಬ್ಬ ಬ್ಯಾಟ್ಸ್ ಮನ್ ಇವರಿಗೆ ಉತ್ತಮ ಸಾಥ್ ನೀಡಲಿಲ್ಲ.
ಬಂಗಾಳ ಪ್ರದೀಪ್ತ್ ಪ್ರಮಾಣಿಕ 48 ರನ್ ನೀಡಿ ನಾಲ್ಕು ವಿಕೆಟ್ ಕಬಳಿಸಿದರು. ವೃತಿಕ್ ಚಟರ್ಜಿ ಎರಡು ವಿಕೆಟ್ ಉರುಳಿಸಿದರು.
ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ರಣ್ ಜೋತ್ ಖೈರ್ ಮತ್ತು ಅಭಿಷೇಕ್ ದಾಸ್ ಜೋಡಿ ಅರ್ಧಶತಕದ ಜೊತೆಯಾಟವನ್ನು ನೀಡಿ ತಂಡಕ್ಕೆ ನೆರವಾದರು. ಅನುಷ್ಠಪ್ ಮಜುಂದಾರ್ ರನ್ ಸೇರಿಸಲು ವಿಫಲರಾದರು.
ಆರಂಭಿಕ ಅಭಿಷೇಕ್ ದಾಸ್ 48 ಎಸೆತಗಳಲ್ಲಿ 7 ಬೌಂಡರಿ, 2 ಸಿಕ್ಸರ್ ಸಹಾಯದಿಂದ 58 ರನ್ ಬಾರಿಸಿ ಪ್ರತೀಕ್ ಜೈನ್ ಗೆ ವಿಕೆಟ್ ಒಪ್ಪಿಸಿದರು.
ನಾಲ್ಕನೇ ವಿಕೆಟ್ ಗೆ ಸುದೀಪ್ ಚಟರ್ಜಿ ಹಾಗೂ ಋತ್ವಿಕ್ ರಾಯ್ ಜೋಡಿ ಸೊಬಗಿನ ಆಟವನ್ನು ಆಡಿ ತಂಡಕ್ಕೆ ನೆರವಾಯಿತು. ಈ ಜೋಡಿ ಶತಕದ ಜೊತೆಯಾಟದ ಕಾಣಿಕೆ ನೀಡಿ ತಂಡಕ್ಕೆ ಆಸರೆಯಾಯಿತು. ಸುದೀಪ್ 6 ಬೌಂಡರಿ, 1 ಸಿಕ್ಸರ್ ಸಹಾಯದಿಂದ 63 ರನ್ ಬಾರಿಸಿದರೆ, ಋತ್ವಿಕ್ ಒಂದು ರನ್ ಅಂತರದಲ್ಲಿ ಅರ್ಧಶತಕ ವಂಚಿತರಾದರು. ಋತ್ವಿಕ್ 49 ರನ್ ಗಳಿಸಿದ್ದಾಗ ಇಲ್ಲದ ರನ್ ಕದಿಯಲು ಹೋಗಿ ಔಟ್ ಆದರು.
ಉಳಿದಂತೆ ಶಹಬಾಜ್ ಅಹ್ಮದ್ ಅಜೇಯ 26 ಹಾಗೂ ಸುವಂಕರ್ ಬಾಲ್ 22 ಸಿಡಿಸಿ ಔಟ್ ಆದರು.
ಕರ್ನಾಟಕದ ಪರ ಪ್ರತೀಕ್ ಜೈನ್ ಮೂರು ವಿಕೆಟ್ ಕಬಳಿಸಿದರು.