ಲಂಡನ್, ಮೇ28 : ಭಾರತದ ಬ್ಯಾಂಕುಗಳಿಗೆ ಸಾವಿರಾರು ಕೋಟಿ ರೂಪಾಯಿ ವಂಚಿಸಿ ಲಂಡನ್ ಗೆ ಪರಾರಿಯಾಗಿದ್ದ ಮದ್ಯದ ದೊರೆ ವಿಜಯ್ ಮಲ್ಯ ಇದೀಗ ಭಾರತದಲ್ಲಿ ವಿಚಾರಣೆಯಿಂದ ತಪ್ಪಿಸಿಕೊಳ್ಳಲು ಹೊಸ ತಂತ್ರ ರೂಪಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಭಾರತದ ಬ್ಯಾಂಕುಗಳಿಗೆ 9 ಸಾವಿರ ಕೋಟಿ ಸಾಲ ಮರುಪಾವತಿಸದ ವಂಚನೆ, ಅಕ್ರಮ ಹಣ ವರ್ಗಾವಣೆ ಆರೋಪಗಳನ್ನು ಎದುರಿಸುತ್ತಿದ್ದ ವಿಜಯ್ ಮಲ್ಯ ಲಂಡನ್ ಗೆ ಪರಾರಿಯಾಗಿದ್ದರು. ಭಾರತ ಸರ್ಕಾರ ಅವರನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಕೋರಿ ಬ್ರಿಟನ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿತು. ವಿಜಯ್ ಮಲ್ಯ ತಮ್ಮನ್ನು ಭಾರತಕ್ಕೆ ಹಸ್ತಾಂತರಿಸದಂತೆ ಸಲ್ಲಿಸಿದ ಮೇಲ್ಮನವಿಯನ್ನು ಇತ್ತೀಚೆಗೆ ಬ್ರಿಟನ್ ಹೈಕೋರ್ಟ್ ತಳ್ಳಿಹಾಕಿತ್ತು.
ಭಾರತಕ್ಕೆ ಹಸ್ತಾಂತರಿಸದಂತೆ ಕಾನೂನಾತ್ಮಕ ಹೋರಾಟದ ಎಲ್ಲ ಮಾರ್ಗಗಳನ್ನು ಬಳಸಿಕೊಂಡಿರುವ ಮಲ್ಯ, ಈಗ ಕೊನೆಯದಾಗಿ ಹೊಸ ತಂತ್ರವೊಂದನ್ನು ಹೆಣೆಯುತ್ತಿದ್ದಾರೆ ಎಂದು ಬ್ರಿಟನ್ ಕಾನೂನು ತಜ್ಞರ ಮೂಲಗಳು ಹೇಳಿವೆ. ಬ್ರಿಟನ್ ಕಾನೂನಿನಲ್ಲಿ ಯಾವುದೇ ಒಬ್ಬ ವ್ಯಕ್ತಿ ‘ನಿರಾಶ್ರಿತ’ ಎಂಬ ಅರ್ಹತೆ ಗಳಿಸಿಸುವ ಅವಕಾಶವಿದೆ.
ತನ್ನ ಸ್ವಂತ ದೇಶದಲ್ಲಿ ಪ್ರಕರಣಗಳ ಮೂಲಕ, ರಾಜಕೀಯವಾಗಿ, ಸಾಮಾಜಿಕವಾಗಿ ಅಥವಾ ಇನ್ನಿತರ ಕಾರಣಗಳಿಂದ ಹಿಂಸಿಸಲ್ಪಡುವ ಅವಕಾಶಗಳಿದ್ದರೆ ಅಂತಹವರನ್ನು ನಿರಾಶ್ರಿತ ರೆಂದು ಪರಿಗಣಿಸಿ ಬ್ರಿಟನ್ ನಲ್ಲಿ ಭದ್ರತೆ ಕಲ್ಪಿಸಲಾಗುತ್ತದೆ. ಅಲ್ಲದೇ ಯಾವುದೇ ಒಬ್ಬ ವ್ಯಕ್ತಿಗೆ ‘ನಿರಾಶ್ರಿತ’ ಎಂಬ ಆರ್ಹತೆ ಕಲ್ಪಿಸಲು ನ್ಯಾಯಾಲಯ ಸುದೀರ್ಘ ವಿಚಾರಣೆ ನಡೆಸುತ್ತದೆ. ಈ ವಿಚಾರಣೆ ಸುಮಾರು ಎರಡು ವರ್ಷಗಳ ಕಾಲ ನಡೆಯುವ ಸಾಧ್ಯತೆ ಇದೆ ಎಂದು ಬ್ರಿಟನ್ ನ ಹಿರಿಯ ನ್ಯಾಯವಾದಿಗಳು ಅಭಿಪ್ರಾಯಪಟ್ಟಿದ್ದು, ಒಂದು ವೇಳೆ ಆ ವ್ಯಕ್ತಿ ನಿರಾಶ್ರಿತ ಎಂಬ ಅರ್ಹತೆ ಗಳಿಸಿದರೆ ನ್ಯಾಯಮಂಡಳಿಗೆ ಕೂಡಾ ಮೇಲ್ಮನವಿ ಸಲ್ಲಿಸಬಹುದಾಗಿದೆ. ಹಾಗಾಗಿ ಭಾರತದಲ್ಲಿ ವಿಚಾರಣೆಯಿಂದ ತಪ್ಪಿಸಿಕೊಳ್ಳಲು ಈ ತಂತ್ರವನ್ನು ಹೂಡುವ ನಿರೀಕ್ಷೆಯಿದೆ ಎಂಬುವುದು ಬ್ರಿಟನ್ ನ್ಯಾಯ ತಜ್ಞರ ಅಭಿಪ್ರಾಯ.








