ವಿಜಯ್ ಮಲ್ಯ ದಿವಾಳಿ – ಲಂಡನ್ ಹೈ ಕೋರ್ಟ್ ಘೋಷಣೆ
ಲಂಡನ್ : ಭಾರತದಲ್ಲಿ ಕೋಟಿ ಕೋಟಿ ರೂಪಾಯಿ ವಂಚಿಸಿ ವಿದೇಶಕ್ಕೆ ಎಸ್ಕೇಪ್ ಆಗಿರುವ ಉದ್ಯಮಿ ವಿಜಯ್ ಮಲ್ಯನನ್ನು ಲಂಡನ್ ಹೈ ಕೋರ್ಟ್ ದಿವಾಳಿ ಎಂದು ಘೋಷಿಸಿದೆ. ಎಸ್‍ಬಿಐ ನೇತೃತ್ವದ ಭಾರತೀಯ ಬ್ಯಾಂಕ್‍ಗಳ ಒಕ್ಕಟವೂ ಇದೀಗ ಸ್ಥಗಿತಗೊಂಡಿರುವ ವಿಜಯ್ ಮಲ್ಯ ಅವರ ಕಿಂಗ್‍ಫಿಶರ್ ಏರ್ ಲೈನ್ಸ್ ಗೆ ನೀಡಿದ ಸಾಲವನ್ನು ವಸೂಲಿ ಮಾಡಲು ಈ ತೀರ್ಪು ನೆರವಾಗಲಿದೆ. ಮಲ್ಯ ಅವರು ಹೈ ಕೋರ್ಟ್ ತೀರ್ಪಿನ ಮೇಲ್ಮನವಿ ಸಲ್ಲಿಸಲು ಪ್ರಯತ್ನಿಸಿದ್ದು ವಿಫಲರಾಗಿದ್ದಾರೆ. ಅವರಿಗೆ ಅನುಮತಿ ನಿರಾಕರಿಸಲಾಗಿದೆ ಎಂದು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.
ಮೇ ತಿಂಗಳಲ್ಲಿ ಯುಕೆ ಕೋರ್ಟ್ ಎಸ್‍ಬಿಐ ನೇತೃತ್ವದ ಸಾಲದಾತ ಒಕ್ಕೂಟದ ದಿವಾಳಿತನದ ಕುರಿತು ಸಲ್ಲಿಸಿದ್ದ ಅರ್ಜಿಯನ್ನು ಎತ್ತಿ ಹಿಡಿದಿತ್ತು. ಭಾರತದಲ್ಲಿ ಮಲ್ಯ ಅವರ ಆಸ್ತಿಗಳ ಮೇಲಿನ ಭದ್ರತೆಯನ್ನು ಮನ್ನಾ ಮಾಡುವ ಪರವಾಗಿ ಅರ್ಜಿಯನ್ನು ಎತ್ತಿಹಿಡಿದಿತ್ತು.
ಭದ್ರತಾ ಹಕ್ಕುಗಳನ್ನು ಮನ್ನಾ ಮಾಡುವುದನ್ನು ತಡೆಯುವಂತೆ ಮಲ್ಯ ಪರ ವಕೀಲರು ವಾದ ಮಂಡಿಸಿದ್ದರು. ಆದರೆ ಈ ಮನವಿಯಲ್ಲಿ ಯಾವುದೇ ಸಾರ್ವಜನಿಕ ನೀತಿ ಇಲ್ಲ ಎಂದು ಘೋಷಿಸಿ ಬ್ಯಾಂಕ್‍ಗಳ ಪರವಾಗಿ ಚೀಫ್ ಇನ್ಸೋಲ್ವೆನ್ಸೀಸ್ ಆ್ಯಂಡ್ ಕಂಪನೀಸ್ ಕೋರ್ಟ್ ಜಡ್ಜ್ ಮೈಕೆಲ್ ಬ್ರಿಗ್ಸ್ ಅವರು ಆದೇಶ ನಿಡಿದ್ದರು.
ಫೆಬ್ರವರಿಯಲ್ಲಿ ಡೆಪ್ಯೂಟಿ ಐಸಿಸಿ ನ್ಯಾಯಾಧೀಶ ಬರ್ನೆಟ್ ನೀಡಿದ ಆದೇಶವನ್ನು ಪ್ರಶ್ನಿಸಿ ವಿಜಯ್ ಮಲ್ಯ ಹೈ ಕೋರ್ಟ್‍ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಆರ್ಥಿಕ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದ ಬಾರ್ನೆಟ್ ಅವರು, ಭವಿಷ್ಯದ ಕಾನೂನು ಶುಲ್ಕ ಹಾಗೂ ತನ್ನ ಜೀವನ ಸಾಗಿಸಲು ಮಾಸಿಕ 23 ಲಕ್ಷ ರೂ.ಗಳನ್ನು ಕೋರ್ಟ್ ಫಂಡ್ಸ್ ಆಫೀಸ್‍ನಿಂದ ನೀಡಲು ಅನುಮತಿಸಿದ್ದರು.
ಆದರೆ ಇದರಲ್ಲಿ ಭಾರತದಲ್ಲಿನ ವಕೀಲರಿಗೆ ನೀಡುವ ಹಣವನ್ನು ಸೇರಿಸಿರಲಿಲ್ಲ. ಹೀಗಾಗಿ ಇದೀಗ ಭಾರತದಲ್ಲಿನ ವಕೀಲರ ಶುಲ್ಕವನ್ನು ಸಹ ಕೋಟ್ರ್ಸ್ ಫಂಡ್ಸ್ ಆಫೀಸ್‍ನಿಂದ ನೀಡಬೇಕು ಎಂದು ಅರ್ಜಿ ಸಲ್ಲಿಸಿದ್ದಾರೆ. ಒಟ್ಟು 12 ಕೋಟಿ ರೂ. ಆಸ್ತಿಯನ್ನು ಬಳಸಲು ಮಲ್ಯಗೆ ಬರ್ನೆಟ್ ಅವರು ಆಗ ಅನುಮತಿ ನೀಡಿದ್ದರು.
ಈಗಾಗಲೇ ಮಲ್ಯ ಭಾರತದಲ್ಲಿನ ಕಾನೂನು ಸಂಸ್ಥೆಗಳಿಗೆ ನೀಡುವ 5.7 ಕೋಟಿ ರೂ.ಗಳನ್ನು ಬಾಕಿ ಉಳಿಸಿಕೊಂಡಿದ್ದಾರೆ. ಅಲ್ಲದೆ ಭಾರತದಲ್ಲಿನ ಭವಿಷ್ಯದ ಕಾನೂನು ವೆಚ್ಚಗಳಿಗಾಗಿ ಅವರಿಗೆ ಇನ್ನೂ 2 ಕೋಟಿ ರೂ. ಅಗತ್ಯವಿದೆ ಎಂದು ಬ್ರಿಟಿಷ್ ನ್ಯಾಯಾಲಯಕ್ಕೆ ತಿಳಿಸಲಾಗಿತ್ತು.