ಬಾಗಲಕೋಟೆ: ಡಿಸಿಸಿ ಬ್ಯಾಂಕ್ ಪಿಗ್ಮಿ ಎಜೆಂಟ್ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಲು ಬೆಂಬಲಿಗರಿಗೆ ನೊಟೀಸ್ ನೀಡಿದ್ದಕ್ಕೆ ಕಾಂಗ್ರೆಸ್ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಇಳಕಲ್ ಠಾಣೆಗೆ ನುಗ್ಗಿ ಧಕ್ಮಿ ಹಾಕಿದ್ದಾರೆ.
ಬಾಗಲಕೋಟೆ ಜಿಲ್ಲೆ ಇಳಕಲ್ ನಗರ ಠಾಣೆಯಲ್ಲಿ ಡಿಸೆಂಬರ್ 17ರಂದು ನಡೆದ ಕಾಶಪ್ಪನವರ್ ಕಿರಿಕ್ ಮಾಡಿ ಧಮ್ಕಿ ಹಾಕಿದ ವಿಡಿಯೋ ವೈರಲ್ ಆಗಿದೆ.
ಇಳಕಲ್ನ ನಾಗೂರು ರಸ್ತೆ ಬಳಿ ಡಿಸಿಸಿ ಬ್ಯಾಂಕ್ ಪಿಗ್ಮಿ ಎಜೆಂಟ್ ಬಸವರಾಜ ಅಕ್ಟೋಬರ್ 27 ರಂದು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು. ತಲೆಗೆ ಏಟು ಬಿದ್ದ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ಈ ಹಿನ್ನೆಲೆ ವಿಜಯಾನಂದ ಕಾಶಪ್ಪನವರ್ ಬೆಂಬಲಿಗರಾದ ಮಂಜುನಾಥ ಗೊಂದಿ, ಇಳಕಲ್ ಡಿಸಿಸಿ ಬ್ಯಾಂಕ್ ಮ್ಯಾನೇಜರ್ ಬಿ.ಎಸ್ ಪಾಟೀಲ್ ಹಾಗೂ ಇತರರ ವಿರುದ್ಧ ಕೇಸ್ ದಾಖಲಾಗಿತ್ತು. ಪೊಲೀಸರಿಂದ ಬಂಧನಕ್ಕೂ ಮೊದಲೇ 11 ಜನ ಆರೋಪಿಗಳು ನಿರೀಕ್ಷಣಾ ಜಾಮೀನು ಪಡೆದಿದ್ದರು. ವಿಚಾರಣೆಗೆ ಹಾಜರಾಗಲು ಎರಡು ಬಾರಿ ಮನೆಗೆ ನೊಟೀಸ್ ಕಳಿಸಲಾಗಿತ್ತು. ಆದರೂ ವಿಚಾರಣೆಗೆ ಹಾಜರಾಗಿರಲಿಲ್ಲ.
ಕೊನೆಗೂ ಶುಕ್ರವಾರ ಇಳಕಲ್ ಠಾಣೆಗೆ ವಿಚಾರಣೆಗೆ ಆರೋಪಿಗಳು ಹಾಜರಾಗಿದ್ದರು. ಪೊಲೀಸರು ಆರೋಪಿಗಳ ವಿಚಾರಣೆ ನಡೆಸುತ್ತಿದ್ದರು. ಆದರೂ, ಜಾಮೀನು ಪಡೆದರೂ ಬೆಂಬಲಿಗರನ್ನು ಬಿಡುತ್ತಿಲ್ಲ ಎಂದು ಠಾಣೆಗೆ ಬಂದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್, ಹುನಗುಂದ ಇನ್ಸ್ ಪೆಕ್ಟರ್ ಅಯ್ಯನಗೌಡ ಜೊತೆ ವಾಗ್ವಾದ ನಡೆಸಿ ನಿಂದಿಸಿದ್ದಾರೆ. ಅಲ್ಲದೆ `ಹೆ ಮಿಸ್ಟರ್ ಇವರಿಗೆ ಏನ್ ವಿಚಾರಣೆ ಮಾಡ್ತಿಯಾ ? ಜಾಮೀನು ಪತ್ರ ತೆಗೆದುಕೊಂಡು ಕಳಿಸೋದು ಅಷ್ಟೇ ನಿನ್ನ ಕೆಲಸ. ಅವರಿಗ್ಯಾಕೆ ನೊಟೀಸ್ ಕೊಡ್ತಿಯಾ..? ಯಾರೂ ನೊಟೀಸ್ ತಗೊಬ್ಯಾಡ್ರಿಲೆ’ ಎಂದು ಬೆಂಬಲಿಗರಿಗೆ ಹೇಳಿದ್ದಾರೆ.
ಅಷ್ಟಕ್ಕೇ ಸುಮ್ಮನಾಗದೇ, `ಹೇ ಮಗನೆ ಕಾನೂನು ಮಾಡುವವನು ನಾನು. ನೀ ಏನು ಕಾನೂನಿನ ಬಗ್ಗೆ ಹೇಳ್ತಿಯಾ. ಇವರ್ಯಾರು ಇನ್ನು ಮುಂದೆ ವಿಚಾರಣೆಗೆ ಬರೋದಿಲ್ಲ. ನೀ ಏನ್ ಪೊಲೀಸ್ ಕೆಲಸ ಮಾಡ್ತಿಲೆ..ನಿನ್ ಸಸ್ಪೆಂಡ್ ಮಾಡಿಸ್ತೀನಿ’ ಎಂದು ಸಿಪಿಐ ಅಯ್ಯನಗೌಡಗೆ ಆವಾಜ್ ಹಾಕಿದ್ದಲ್ಲದೆ, ಠಾಣೆ ಬಿಟ್ಟು ಹೊರಗೆ ಬಾ ನೋಡಿಕೊಳ್ತೀನಿ ಎಂದು ಧಮ್ಕಿ ಹಾಕಿದ್ದಾರೆ.
ಸಿಪಿಐ ಅಯ್ಯನಗೌಡ ದೂರಿನ ಮೇರೆಗೆ ವಿಜಯಾನಂದ ಕಾಶಪ್ಪನವರ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಕರ್ತವ್ಯಕ್ಕೆ ಅಡ್ಡಿ, ನಿಂದನೆ, ಬೆದರಿಕೆ ಸೇರಿದಂತೆ ಕಲಂ 143, 147, 353, 504, 506 ಅಡಿಯಲ್ಲಿ ಕೇಸ್ ಎಫ್ಐಆರ್ ದಾಖಲಿಸಲಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel