ಈ ಬಾರಿ ವಿಜಯಪುರಕ್ಕೆ ಅನ್ಯಾಯ ಆಗಲ್ಲ : ಯತ್ನಾಳ್
ವಿಜಯಪುರ : ಈ ಬಾರಿ ಯಾವುದೇ ಪರಿಸ್ಥಿತಿಯಲ್ಲೂ ವಿಜಯಪುರ ಜಿಲ್ಲೆಗೆ ಅನ್ಯಾಯವಾಗುವುದಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್, ನನ್ನ ಲೆಕ್ಕಾಚಾರದ ಪ್ರಕಾರ ಶೀಘ್ರದಲ್ಲಿ ಸಚಿವ ಸಂಪುಟದಲ್ಲಿ ಕೆಲವು ಬದಲಾವಣೆಗಳು ಆಗಬಹುದು. ಉಳಿದಿರುವ ನಾಲ್ಕು ಸ್ಥಾನಗಳು ಭರ್ತಿ ಆಗಬಹುದು ಎಂಬ ನಿರೀಕ್ಷೆ ಇದೆ.
ಈ ಸಲ ಯಾವುದೇ ಪರಿಸ್ಥಿತಿಯಲ್ಲಿ ವಿಜಯಪುರ ಜಿಲ್ಲೆಗೆ ಅನ್ಯಾಯ ಆಗುವುದಿಲ್ಲ. ಯಾವುದು ಗುಪ್ತ ಸಭೆಗಳಿಲ್ಲ, ಎಲ್ಲವೂ ಪಕ್ಷದ ಬೆಳವಣಿಗೆಗೆ, 2023 ರ ಚುನಾವಣೆಯಲ್ಲಿ ಸ್ಪಷ್ಟ ಬಹುಮತದೊಂದಿಗೆ ಗೆಲ್ಲಬೇಕಿದೆ.
ಸುಮಾರು 139 ಸೀಟ್ ಗೆಲ್ಲುವಷ್ಟು ಹಾಗೂ ಈಗಿರುವ 25 ಲೋಕಸಭಾ ಉಳಿಸಿಕೊಳ್ಳಬೇಕು ಎಂಬ ಕಾರಣಕ್ಕೆ ಸಭೆಗಳು ಆಗುತ್ತಿವೆ.
ಇದರಲ್ಲಿ ಯಾವುದೂ ಪಕ್ಷ ವಿರೋಧಿ, ಹಿನ್ನೆಡೆ, ಪಕ್ಷಕ್ಕೆ ದ್ರೋಹ ಮಾಡುವಂತಹದ್ದು ಇಲ್ಲ. ಉಮೇಶ ಕತ್ತಿ, ನಾನು, ರೇಣುಕಾಚಾರ್ಯ, ರಮೇಶ ಜಾರಕಿಹೊಳಿ ಅವರೆಲ್ಲ ಸೇರಿ ಮಾಡಿದ್ದು ಇದೇ ಸಭೆ.

ಇವೆಲ್ಲ ಗುಪ್ತ ಸಭೆಗಳಲ್ಲ, ಬಹಿರಂಗ ಸಭೆಗಳು. ಯಾರನ್ನೇ ಸಚಿವರನ್ನಾಗಿ ಮಾಡಿದ್ರೂ ಕನಿಷ್ಟ ಒಂದು ಅಥವಾ ಒಂದೂವರೇ ವರ್ಷ ಅವಕಾಶ ಕೊಟ್ಟರೆ, ಯೋಜನೆಗಳನ್ನು ಜನರಿಗೆ ಮುಟ್ಟಿಸಲು ಅನುಕೂಲ ಆಗುವುದು.
ಚುನಾವಣೆ ಕೇವಲ ಆರು ತಿಂಗಳು ಇದ್ದಾಗ ಸಚಿವ ಸಂಪುಟ ಮಾಡಿದ್ರೆ ಇಲಾಖೆ ಬಗ್ಗೆ ಅಧ್ಯಯನ ಮಾಡುವುದರಲ್ಲೇ ಸಮಯ ಕಳೆಯುತ್ತೆ ಎಂದು ಬೇಗ ಸಂಪುಟ ವಿಸ್ತರಣೆ ಆಗಬೇಕು ಅಂತಾ ಒತ್ತಾಯಿಸಿದರು.
ಚುನಾವಣೆ ಸಮೀಪ ಬಂದಾಗ ಅಧಿಕಾರಿಗಳು ದರ್ಪನಡೆಯುತ್ತೆ. ವಿಜಯಪುರ, ಯಾದಗಿರಿ, ಕಲಬುರಗಿ, ಮೈಸೂರು, ಚಾಮರಾಜನಗರ, ಕೊಡಗು ಸೇರಿದಂತೆ ಅನೇಕ ಜಿಲ್ಲೆಗಳು ಸಚಿವ ಸ್ಥಾನದಿಂದ ವಂಚನೆಗೊಂಡಿವೆ.
ಅವುಗಳಿಗೆ ಸೂಕ್ತ ಸ್ಥಾನಮಾನ, ಜಾತಿ ಆಧಾರದ ಮೇಲೆ ಎಲ್ಲ ಜಾತಿಯವರಿಗೂ ಸೂಕ್ತ ಪ್ರಾತಿನಿಧ್ಯ ಕೊಡಬೇಕು.
ಬೊಮ್ಮಾಯಿ ನೇತ್ರತ್ವದ ಸರ್ಕಾರ ಒಳ್ಳೇ ಕೆಲಸ ಮಾಡಬೇಕು ಎನ್ನುವುದು ಬಿಟ್ಟರೆ, ಯಾವ ಶಾಸಕರು ಮಂತ್ರಿಯಾಗಬೇಕು ಎಂಬ ಲಾಬಿ ಇಲ್ಲ, ಬೊಮ್ಮಾಯಿ ವಿರುದ್ಧವೂ ಅಲ್ಲ, ಇವು ಪಕ್ಷದ ಹಿತದೃಷ್ಠಿಯಿಂದ ಆದಂತಹ ಸಭೆಗಳು ಎಂದು ಕತ್ತಿ ಸಭೆಯ ಬಗ್ಗೆ ಸ್ಪಷ್ಟನೆ ನೀಡಿದರು.