( Vijayendra ) ವಿಜಯೇಂದ್ರ ಪಕ್ಷದಲ್ಲಿ ಇನ್ನೂ ಎತ್ತರಕ್ಕೆ ಬೆಳೆಯಬೇಕು : ಬಿ.ಶ್ರೀರಾಮುಲು
ಬಳ್ಳಾರಿ : ವಿಜಯೇಂದ್ರ ( Vijayendra ) ಅವರಂತಹ ಯುವ ನಾಯಕರು ಪಕ್ಷದಲ್ಲಿ ಇನ್ನೂ ಎತ್ತರಕ್ಕೆ ಬೆಳೆಯ ಬೇಕು ಎಂದು ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.
ಬಳ್ಳಾರಿಯ ಸಿರುಗುಪ್ಪ ರಸ್ತೆಯಲ್ಲಿರುವ ಅವಂಬಾವಿಯ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ರಾಮುಲು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಕೈ ಇಟ್ಟಲೆಲ್ಲಾ ಬಿಜೆಪಿ ಗೆಲುವು ಖಚಿತವಾಗಿದೆ.
ಅದರಂತೆಯೇ ಶಿರಾ ಹಾಗೂ ಆರ್.ಆರ್ ನಗರ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಬಿಜೆಪಿ ಗೆಲುವು ಸಾಧಿಸಲಿದೆ. ವಿಜಯೇಂದ್ರ ಅವರಂತಹ ಯುವ ನಾಯಕರು ಪಕ್ಷದಲ್ಲಿ ಇನ್ನೂ ಎತ್ತರಕ್ಕೆ ಬೆಳೆಯ ಬೇಕು ಎಂದರು.
ಇದೇ ವೇಳೆ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಕಿಡಿಕಾರಿದ ಸಚಿವರು, ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಿದರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್? ಸಿಎಂ ಆಗ್ತಾರಾ..? ಎಂದು ವ್ಯಂಗ್ಯವಾಡಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಶಿರಾ ಮತ್ತು ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನ ಗೆಲ್ಲಿಸಿಕೊಂಡು ಬಂದ್ರೆ ಮುಂಬರುವ ದಿನಗಳಲ್ಲಿ ಮುಖ್ಯಮಂತ್ರಿ ಆಗುವ ಹಗಲುಗನಸು ಕಾಣುತ್ತಿದ್ದಾರೆ. ಇಲ್ಲೇನೋ
ಮುಖ್ಯಮಂತ್ರಿ ಕುರ್ಚಿ ಖಾಲಿಯಿದೆ ಎಂದು ತಿಳಿದು ಕೊಂಡಿದ್ದಾರೆ. ಆದ್ರೆ ಬಿ.ಎಸ್ ಯಡಿಯೂರಪ್ಪ ಈಗಾಗಲೇ ಆ ಕುರ್ಚಿಯನ್ನ ಅಲಂಕರಿಸಿದ್ದಾರೆ. ಅದನ್ನು ಅರಿತುಕೊಂಡು ಡಿ.ಕೆ ಶಿವಕುಮಾರ್ ಮುನ್ನಡೆಯಬೇಕು ಎಂದು ತಿಳಿಸಿದರು.
ಇನ್ನು ರಾಜರಾಜೇಶ್ವರಿ ಹಾಗು ಶಿರಾ ಉಪಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿಗಳೇ ಗೆಲ್ಲೋದು ಎಂದು ವಿಶ್ವಾಸ ವ್ಯಕ್ತಪಡಿಸಿದ ರಾಮುಲು, ಚುನಾವಣಾ ಫಲಿತಾಂಶದವರೆಗೆ ಕಾದು ನೋಡಿ.
ಡಿ.ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ನಡುವಿನ ಒಣ ಪ್ರತಿಷ್ಠೆಯಿಂದಲೇ ಈ ಎರಡು ಕ್ಷೇತ್ರಗಳು ಜಿದ್ದಾ ಜಿದ್ದಿನ ಕಣಗಳಾಗಿ ಮಾರ್ಪಟ್ಟಿವೆ. ಅವರಿಬ್ಬರ ನಡುವಿನ ಒಳ ಜಗಳ ನಮಗೆ ವರದಾನವಾಗಲಿದೆ ಎಂದು ಹೇಳಿದರು.