ಗ್ರಾಮ ಪಂಚಾಯ್ತಿ ಸಿಬ್ಬಂದಿ ಕೊರೊನಾ ವಾರಿಯರ್ಸ್
ಶಿವಮೊಗ್ಗ : ಗ್ರಾಮೀಣ ಪ್ರದೇಶದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷರು-ಸದಸ್ಯರು, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಕಾರ್ಯದರ್ಶಿಗಳು ಗ್ರಾಮೀಣ ಜನರ ಸಹಕಾರ ಪಡೆದು ಕೊರೊನಾ ಮುಕ್ತ ಗ್ರಾಮಗಳ ನಿರ್ಮಾಣಕ್ಕೆ ಸಂಕಲ್ಪ ಮಾಡಬೇಕು ಎಂದು ಸಚಿವ ಕೆ.ಎಸ್ ಈಶ್ವರಪ್ಪ ತಿಳಿಸಿದ್ದಾರೆ.
ಸೋಂಕು ನಿಯಂತ್ರಣಕ್ಕಾಗಿ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಕೈಗೊಂಡಿರುವ ಹಾಗೂ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮೈಸೂರು ಮತ್ತು ಬೆಂಗಳೂರು ವಿಭಾಗದ ಎಲ್ಲಾ ಜಿಲ್ಲೆಗಳ ಜಿಲ್ಲಾ ಪಂಚಾಯ್ತಿ ಸಿಇಒ ಹಾಗೂ ಆಯಾ ಜಿಲ್ಲೆಗಳ ವ್ಯಾಪ್ತಿಯ ಗ್ರಾಮ ಪಂಚಾಯಿತಿ ಪಿಡಿಒಗಳೊಂದಿಗೆ ಈಶ್ವರಪ್ಪ ವೀಡಿಯೋ ಸಂವಾದ ನಡೆಸಿದರು.
ಈ ವೇಳೆ ಕೋವಿಡ್ ನಿಯಂತ್ರಣದಲ್ಲಿ ಗ್ರಾಮ ಪಂಚಾಯ್ತಿಗಳ ಪಾತ್ರ ಪ್ರಮುಖವಾದುದ್ದಾಗಿದೆ.
ಕೊರೊನಾ 2ನೇ ಅಲೆಯು ಅತ್ಯಂತ ಅಪಾಯಕಾರಿಯಾಗಿದ್ದು, ಅದರ ನಿಯಂತ್ರಣಕ್ಕಾಗಿ ಪ್ರತಿಯೊಬ್ಬರೂ ಎಚ್ಚರಿಕೆಯ ಹೆಜ್ಜೆಗಳನ್ನು ಇಡಬೇಕಾದ ಅಗತ್ಯವಿದೆ.
ಈ ಹಿಂದೆ ರಚಿಸಲಾಗಿದ್ದ ಕಾರ್ಯಪಡೆಗಳು ಅತ್ಯಂತ ಯಶಸ್ವಿಯಾಗಿ ಕಾರ್ಯನಿರ್ವಹಿದ್ದವು. ಈ ಕಾರ್ಯಪಡೆಗಳನ್ನು ಇನ್ನಷ್ಟು ಬಲಿಷ್ಠಗೊಳಿಸಿ ಹೆಚ್ಚಿನ ಜವಾಬ್ದಾರಿ ನೀಡಬೇಕಾದ ಅಗತ್ಯವಿದೆ. ಹಾಗಾದಾಗ ಸೋಂಕು ಹತೋಟಿಗೆ ಬರುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟರು.