ಪ್ಯಾರಿಸ್: ಭಾರತದ ಕುಸ್ತಿಪಟು ವಿನೇಶ್ ಫೋಗಟ್ (Vinesh Phogat) ಅವರು ಸಲ್ಲಿಸಿದ್ದ ಮೇಲ್ಮನವಿ ತೀರ್ಪನ್ನು ಕ್ರೀಡಾ ಮಧ್ಯಸ್ಥಿಕೆ ನ್ಯಾಯ ಮಂಡಳಿ (CAS) ಮತ್ತೆ ಮುಂದೂಡಿದೆ.
ಸಿಎಎಸ್ ತೀರ್ಪು ಮಂಗಳವಾರ ರಾತ್ರಿ ಪ್ರಕಟವಾಗಬೇಕಿತ್ತು. ಆದರೆ, ಆ.16 ರಂದು ತೀರ್ಪು ನೀಡುವುದಾಗಿ ಹೇಳಿದೆ. ಪ್ಯಾರಿಸ್ ಒಲಿಂಪಿಕ್ಸ್ (Paris Olympics)ನ ಫೈನಲ್ ಪಂದ್ಯ ತಲುಪಿದ್ದ ಭಾರತೀಯ ಕುಸ್ತಿ ಪಟು ವಿನೇಶ್ ಫೋಗಟ್ ನಿಗದಿಗಿಂತ 100 ಗ್ರಾಂ ಅಧಿಕ ತೂಕ ಹೆಚ್ಚಿದ್ದಿದ್ದಕ್ಕೆ ಅವರನ್ನು ಮಹಿಳೆಯರ ಕುಸ್ತಿ ಸ್ಪರ್ಧೆಯ 50 ಕೆ.ಜಿ. ವಿಭಾಗದ ಫೈನಲ್ನಿಂದ ಅನರ್ಹಗೊಳಿಸಲಾಗಿತ್ತು. ಹೀಗಾಗಿ ಇದು ವಿವಾದಕ್ಕೆ ದಾರಿ ಮಾಡಿಕೊಟ್ಟಿತ್ತು. ಫೈನಲ್ ವರೆಗೂ ಸರಿಯಾದ ತೂಕ ಇದ್ದು ಹೋಗಿದ್ದೇನೆ. ನನಗೆ ಬೆಳ್ಳಿಯಾದರೂ ಬರಬೇಕಿತ್ತು ಎಂದು ವಿನೇಶ್ ಫೋಗಟ್ ಮನವಿ ಮಾಡಿದ್ದಾರೆ.
ಕ್ರೀಡಾಕೂಟದ ಸಂದರ್ಭದಲ್ಲಿ ವಿವಾದ ಪರಿಹಾರಕ್ಕಾಗಿ ವಿಶೇಷವಾಗಿ ಸ್ಥಾಪಿಸಲಾಗಿರುವ ಸಿಎಎಸ್ ನ ತಾತ್ಕಾಲಿಕ ವಿಭಾಗಕ್ಕೆ ತಮ್ಮ ವಿರುದ್ಧದ ಕ್ರಮ ಪ್ರಶಸ್ನಿ ವಿನೇಶ್ ಆ.9 ರಂದು ಮೇಲ್ಮನವಿ ಸಲ್ಲಿಸಿದ್ದಾರೆ. ಮನವಿ ಪುರಸ್ಕರಿಸಿದ ಸಿಎಎಸ್ ಆರಂಭದಲ್ಲಿ ಆ.10 ರಂದು ತೀರ್ಪು ಪ್ರಕಟಿಸುವುದಾಗಿ ಹೇಳಿತ್ತು. ನಂತರ ಆ.13 ರಂದು ಪ್ರಕಟಿಸಲಾಗುವುದಾಗಿ ಸೂಚಿಸಿತ್ತು. ಆದರೆ, ಈಗ ತೀರ್ಪನ್ನು ಮೂರನೇ ಬಾರಿ ಮುಂದೂಡಿದ್ದು, ಆ.16 ರಂದು ಪ್ರಕಟಿಸುವುದಾಗಿ ಹೇಳಿದೆ.
ಫೈನಲ್ ಪಂದ್ಯದ ಮುನ್ನಾದಿನ ನಾನು ಮೂರು ಪಂದ್ಯವನ್ನು ಆಡಿದ್ದೇನೆ. ಆ ದಿನ ನಿಗದಿತ 50 ಕೆಜಿ ತೂಕದ ಮಿತಿಯಲ್ಲಿ ಇದ್ದ ಕಾರಣ ಜಂಟಿಯಾಗಿ ಬೆಳ್ಳಿ ಪದಕದ ಗೌರವ ನೀಡಬೇಕೆಂದು ಮನವಿ ಮಾಡಿದ್ದರು. ವಿನೇಶ್ ಫೋಗಟ್ ಪರ ಖ್ಯಾತ ವಕೀಲ ಹರೀಶ್ ಸಾಳ್ವೆ ಮತ್ತು ವಿದುಷ್ಪತ್ ಸಿಂಘಾನಿಯಾ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು.