ಪತ್ನಿ ಮೇಲೆ ಹಲ್ಲೆ – ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ವಿರುದ್ಧ FIR…
ಭಾರತದ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಮತ್ತೊಮ್ಮೆ ವಿವಾದಾತ್ಮಕ ಕೆಲಸದಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಧ್ಯದ ಅಮಲಿನಲ್ಲಿ ನಿಂದಿಸಿ ಅಡುಗೆ ಪ್ಯಾನ್ ಎಸೆದು ಗಾಯಗೊಳಿಸಿದ್ದಾರೆ ಎಂದು ಆರೋಪಿಸಿ ವಿನೋದ ಕಾಂಬ್ಳಿ ಪತ್ನಿ ಆಂಡ್ರಿಯಾ ಹೆವಿಟ್ ಪೊಲೀಸ್ ದೂರು ದಾಖಲಿಸಿದ್ದಾರೆ. ಇದೀಗ ಕಾಂಬ್ಳಿ ವಿರುದ್ಧ ಮುಂಬೈನ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶುಕ್ರವಾರ ಮಧ್ಯಾಹ್ನ 1.30ರ ಸುಮಾರಿಗೆ ಘಟನೆ ನಡೆದಿದ್ದು, ಮದ್ಯದ ಅಮಲಿನಲ್ಲಿ ಬಾಂದ್ರಾ ಪ್ಲಾಂಟ್‌ಗೆ ಬಂದ ಕಾಂಬ್ಳಿ ಈ ರೀತಿ ವರ್ತಿಸಿದ್ದಾರೆ ಎಂದು ಆಂಡ್ರಿಯಾ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.
ಆಂಡ್ರಿಯಾ ದೂರಿಗೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಯೊಬ್ಬರು, ಮಾತನಾಡಿ “ ಮದ್ಯದ ಅಮಲಿನಲ್ಲಿ ಬಾಂದ್ರಾ ಪ್ಲಾಟ್‌ಗೆ ಬಂದ ಕಾಂಬ್ಳಿ ಅವರ ಪತ್ನಿ ಆಂಡ್ರಿಯಾ ಅವರೊಂದಿಗೆ ಜಗಳವಾಡಿದ್ದಾರೆ. ಆ ಸಮಯದಲ್ಲಿ 12 ವರ್ಷದ ಮಗ ಕಾಂಬ್ಳಿಯನ್ನ ತಡೆಯಲು ಪ್ರಯತ್ನಿಸಿದ್ದಾನೆ. ಆದರೇ ಅಡುಗೆ ಮನೆಗೆ ಓಡಿದ ಕಾಂಬ್ಲಿ ಕುಕ್ಕಿಂಗ್ ಪ್ಯಾನ್ ನ್ನ ಆಂಡ್ರಿಯಾ ಮೇಲೆ ಎಸೆದಿದ್ದಾನೆ. ತಲೆಗೆ ಪೆಟ್ಟಾಗಿರುವ ಕಾರಣ ಪೊಲೀಸರಿಗೆ ದೂರು ನೀಡುವ ಮುನ್ನ ಆಂಡ್ರಿಯಾ ಭಾಭಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು ಎಂದು ತಿಳಿಸಿದ್ದಾರೆ. ಕಾಂಬ್ಳಿ ತನ್ನನ್ನು ಮತ್ತು ತಮ್ಮ ಮಗನನ್ನ ಯಾವುದೇ ಕಾರಣವಿಲ್ಲದೆ ನಿಂದಿಸಿದ್ದಾರೆ ಎಂದು ಆಂಡ್ರಿಯಾ ದೂರಿನಲ್ಲಿ ದಾಖಲಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ಬಹಿರಂಗಪಡಿಸಿದ್ದಾರೆ.
51 ವರ್ಷದ ವಿನೋದ್ ಕಾಂಬ್ಳಿಗೆ ವಿವಾದಗಳೇನೂ ಹೊಸದಲ್ಲ. ಈ ಹಿಂದೆಯೂ ಹಲವು ವಿವಾದಗಳಲ್ಲಿ ಭಾಗಿಯಾಗಿದ್ದರು. ಹೌಸಿಂಗ್ ಸೊಸೈಟಿಯಲ್ಲಿ ನಡೆದ ಜಗಳದ ಕಾರಣದಿಂದಾಗಿ ಈ ಹಿಂದೆ ಮುಂಬೈ ಪೊಲೀಸರು ಅವರನ್ನು ಬಂಧಿಸಿದರು. ಕೆಲ ಸಮಯದ ಹಿಂದೆ ಕಾಂಬ್ಳಿ ಕುಡಿದು ವಾಹನ ಚಾಲನೆ ಮಾಡಿ ಸುದ್ದಿಯಾಗಿದ್ದರು.
ಆದರೆ, ಇತ್ತೀಚೆಗೆ ಅವರು ಕ್ರೀಡಾ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಮ್ಮ ದುಃಖವನ್ನ ವ್ಯಕ್ತಪಡಿಸಿದ್ದರು. ತನಗೆ ಯಾವುದೇ ಆದಾಯವಿಲ್ಲ, ಬಿಸಿಸಿಐ ನೀಡುವ ಪಿಂಚಣಿಯಿಂದಲೇ ಜೀವನ ನಡೆಸಬೇಕಾಗಿದೆ ಎಂದು ಅಳಲು ತೋಡಿಕೊಂಡಿದ್ದರು. ವಿನೋದ್ ಕಾಂಬ್ಳಿ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರ ಉತ್ತಮ ಸ್ನೇಹಿತ. ಆಂಡ್ರಿಯಾ ವಿನೋದ್ ಕಾಂಬ್ಳಿ ಅವರ ಎರಡನೇ ಪತ್ನಿ.
Vinod Kambli: Assault on wife – FIR against former cricketer Vinod Kambli…








