ಬೆಂಗಳೂರು: ಕೊರೊನಾ ವೈರಸ್ ಸೋಂಕು ತಡೆಯಲು ಸರ್ಕಾರ ನಾನಾ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸುತ್ತಿದೆ. ಇನ್ನೊಂದೆಡೆ ತಾರೆಯರು ಮನೆಯಲ್ಲಿದ್ದುಕೊಂಡು ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಅಭಿಮಾನಿಗಳಿಗೆ ಕೊರೊನಾ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಆದ್ರೆ ನಟ ವಿನೋದ್ ರಾಜ್ ಅವರು ಕೊರೊನಾ ಹರಡದಂತೆ ಎಚ್ಚರ ವಹಿಸುವುದರ ಭಾಗವಾಗಿ ತಮ್ಮ ಗ್ರಾಮದ ರಸ್ತೆ ಹಾಗೂ ಮನೆಯ ಗೋಡೆಗಳಿಗೆ ರಾಸಾಯನಿಕ ಸಿಂಪಡಣೆ ಮಾಡಿದ್ದಾರೆ.
ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯ ತಮ್ಮ ಸ್ವಗ್ರಾಮದಲ್ಲಿ ನಟ ವಿನೋದ್ ರಾಜ್ ರಾಸಾಯನಿಕ ಸಿಂಪಡಣೆ ಮಾಡಿಸಿದ್ದು, ಈ ಮೂಲಕ ತಮ್ಮ ಗ್ರಾಮದ ಸುರಕ್ಷತೆಗೆ ಮುಂದಾಗಿದ್ದಾರೆ. ವಿನೋದ್ ರಾಜ್ ತಮ್ಮ ತೋಟದಲ್ಲಿ ಬಳಸುವ ಮಿನಿ ಟ್ರ್ಯಾಕ್ಟರ್ ಹಾಗೂ ಪಂಪ್ ಸಹಾಯದಿಂದ ಕ್ರಿಮಿನಾಶಕ ಸಿಂಪಡಣೆ ಮಾಡಿದ್ದಾರೆ. ಸ್ವತಃ ಕ್ರಿಮಿನಾಶಕ ಗನ್ ಹಿಡಿದು ಗ್ರಾಮಕ್ಕೆ ವೈರಸ್ ಕಾಲಿಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಔಷಧಿಯನ್ನು ಸಿಂಪಡಣೆ ಮಾಡಿಸಿದ್ದಾರೆ.
ವಿನೋದ್ ರಾಜ್ ಅವರ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಡೀ ಗ್ರಾಮವೇ ನಟ ವಿನೋದ್ ರಾಜ್ ಮತ್ತು ಲೀಲಾವತಿ ಅವರ ಬೆಂಬಲಕ್ಕೆ ನಿಂತು ಗ್ರಾಮದ ಸ್ವಚ್ಛತೆಗೆ ಮುಂದಾಗಿದೆ.