ನವದೆಹಲಿ: ಕೊರೊನಾ ವೈರಸ್ ಸೋಂಕು ಹರಡದಂತೆ ಎಚ್ಚರವಹಿಸಲು ಕೇಂದ್ರ ಸರ್ಕಾರ ದೇಶಾದ್ಯಂತ ಅನೇಕ ಜಿಲ್ಲೆಗಳನ್ನು ಲಾಕ್ ಡೌನ್ ಮಾಡಿದೆ. ಹೀಗಿದ್ದರೂ ಜನರು ಎಂದಿನಂತೆ ಹೊರಗಡೆ ಓಡಾಡುತ್ತಾ ಬೇಜವಾಬ್ದಾರಿತನ ಪ್ರದರ್ಶನ ಮಾಡುತ್ತಿದ್ದಾರೆ. ಈ ಕಾರಣ ಲಾಕ್ ಡೌನ್ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ರಾಜ್ಯ ಸರ್ಕಾರಗಳಿಗೆ ಕೇಂದ್ರ ಖಡಕ್ ಸಂದೇಶ ರವಾಸಿದೆ. ಅಲ್ಲದೆ ಲಾಕ್ ಡೌನ್ ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಕೇಂದ್ರ ಸರ್ಕಾರ ಆಯಾ ರಾಜ್ಯ ಸರ್ಕಾರಗಳಿಗೆ ತಿಳಿಸಿದೆ.
ಈಗಾಗಲೇ ಹಲವು ರಾಜ್ಯಗಳಲ್ಲಿ 144 ಸೆಕ್ಷನ್ ಕೂಡ ಜಾರಿ ಮಾಡಲಾಗಿದ್ದು, ನಾಲ್ಕು ಮಂದಿಗಿಂತ ಹೆಚ್ಚಿನ ಜನರು ಒಟ್ಟಿಗೆ ಸೇರುವಂತಿಲ್ಲ. ಯಾರು ಈ ನಿಯಮಗಳನ್ನು ಉಲ್ಲಂಘಿಸುತ್ತಾರೋ ಅವರಿಗೆ ಸೆಕ್ಷನ್ 188ರ ಅಡಿಯಲ್ಲಿ ಶಿಕ್ಷೆ ವಿಧಿಸಲಾಗುತ್ತದೆ. ಮಾನವ ಸುರಕ್ಷಿತ ಜೀವನಕ್ಕೆ ಭಂಗ ತಂದರೆ, ಒಂದು ತಿಂಗಳ ಸಜೆ ಮತ್ತು 200 ರೂ. ದಂಡ ಅಥವಾ 6 ತಿಂಗಳು ಜೈಲು ಹಾಗೂ 1,000 ದಂಡ ವಿಧಿಸಲಾಗುತ್ತದೆ.