ವಿರಾಟ್ ಕೊಹ್ಲಿ ವಿಕೆಟ್ ಪಡೆಯುವುದೇ ನನ್ನ ಗುರಿ ಮತ್ತು ಕನಸು – ವೇಗಿ ಇಶಾನ್ ಪೊರೆಲ್
ವಿರಾಟ್ ಕೊಹ್ಲಿ… ವಿಶ್ವದ ಶ್ರೇಷ್ಠ ಕ್ರಿಕೆಟಿಗ. ರನ್ ಮೇಷಿನ್ ನಂತೆ ರನ್ ದಾಖಲಿಸುವ ವಿರಾಟ್ ಕೊಹ್ಲಿ ಎದುರಾಳಿ ತಂಡದ ಬೌಲರ್ ಗಳನ್ನು ದುಃಶ್ವಪ್ನವಾಗಿ ಕಾಡುತ್ತಾರೆ.
ಕೊಹ್ಲಿ ಕ್ರೀಸ್ ನಲ್ಲಿ ಇದ್ದಷ್ಟು ಸಮಯ ಬೌಲರ್ ಗಳಿಗೆ ತಲೆನೋವು ಜಾಸ್ತಿ. ಹಾಗಾಗಿ ಕೊಹ್ಲಿ ಪಡೆಯುವುದೇ ಎದುರಾಳಿ ತಂಡದ ಮುಖ್ಯ ಗುರಿಯಾಗಿರುತ್ತೆ.
ಇದೀಗ ಐಪಿಎಲ್ ಶುರುವಾಗುತ್ತಿದೆ. ಬಂಗಾಳದ ವೇಗಿ ಇಶಾನ್ ಪೊರೆಲ್ ಅವರು ಪ್ರೀತಿಯಿಂದಲೇ ವಿರಾಟ್ ಕೊಹ್ಲಿಗೆ ಸವಾಲು ಹಾಕಿದ್ದಾರೆ.
ವಿರಾಟ್ ಕೊಹ್ಲಿ ಮೂರು ಮಾದರಿಯ ಕ್ರಿಕೆಟ್ ನಲ್ಲೂ ಅತ್ಯದ್ಭುತ ಆಟಗಾರ. ವಿಶ್ವದ ನಂಬರ್ ವನ್ ಕ್ರಿಕೆಟಿಗ. ಅದರಲ್ಲಿ ಎರಡು ಮಾತಿಲ್ಲ. ಆದ್ರೆ ಈ ಬಾರಿಯ ಐಪಿಎಲ್ ನಲ್ಲಿ ವಿರಾಟ್ ಕೊಹ್ಲಿಯವರ ವಿಕೆಟ್ ಪಡೆಯುವುದು ನನ್ನ ಕನಸು ಅಂತ ಪಂಜಾಬ್ ಕಿಂಗ್ಸ್ ತಂಡದ ವೇಗಿ ಇಶಾನ್ ಪೊರೆಲ್ ಹೇಳಿದ್ದಾರೆ.
ಹಾಗಿದ್ರೆ ವಿರಾಟ್ ಕೊಹ್ಲಿಯವರ ವಿಕೆಟ್ ಪಡೆಯುವ ಕನಸು ಕಾಣುತ್ತಿರುವ ಇಶಾನ್ ಪೊರೆಲ್ ಯಾರು ? ಈ ಪ್ರಶ್ನೆಗೆ ಉತ್ತರ ಪಶ್ವಿಮ ಬಂಗಾಳ ತಂಡದ ಹಾಗೂ ಐಪಿಎಲ್ ನಲ್ಲಿ ಪಂಜಾಬ್ ತಂಡದ ಯುವ ವೇಗಿ ಇಶಾನ್ ಪೊರೆಲ್.
ಪ್ರಥಮ ದರ್ಜೆಯ ಪಂದ್ಯದಲ್ಲಿ ಇಶಾನ್ ಅವರು 20 ಪಂದ್ಯಗಳಲ್ಲಿ 53 ವಿಕೆಟ್ ಪಡೆದಿದ್ದಾರೆ. ಹಾಗೇ 25 ಲೀಸ್ಟ್ ಎ ಪಂದ್ಯಗಳಲ್ಲಿ 41 ವಿಕೆಟ್ ಮತ್ತು ಟಿ-ಟ್ವೆಂಟಿ ಪಂದ್ಯಗಳಲ್ಲಿ 16 ವಿಕೆಟ್ ಗಳನ್ನು ಪಡೆದಿದ್ದಾರೆ. 2017ರಿಂದ ಪಶ್ವಿಮ ಬಂಗಾಳ ತಂಡವನ್ನು ರಣಜಿ ಟೂರ್ನಿಯಲ್ಲಿ ಪ್ರತಿನಿಧಿಸುತ್ತಿದ್ದಾರೆ.
ಕಳೆದ ಆಸ್ಟ್ರೇಲಿಯಾ ಸರಣಿಯ ವೇಳೆ ಇಶಾನ್ ಪೊರೆಲ್ ಅವರು ನಾಲ್ಕು ಮಂದಿ ನೆಟ್ ಬೌಲರ್ ಗಳಲ್ಲಿ ಒಬ್ಬರಾಗಿದ್ದರು. ಆದ್ರೆ ಇಶಾನ್ ಗಾಯದಿಂದಾಗಿ ಮತ್ತೆ ವಾಪಾಸ್ ಭಾರತಕ್ಕೆ ಬಂದಿದ್ದರು. ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ 20 ದಿನಗಳ ಕಾಲ ಚಿಕಿತ್ಸೆ ಪಡೆದುಕೊಂಡಿದ್ದರು. ನಂತರ ವಿಜಯ ಹಜಾರೆ ಮತ್ತು ಸಯ್ಯದ್ ಮುಷ್ತಾಕ್ ಆಲಿ ಕ್ರಿಕೆಟ್ ಟೂರ್ನಿಯಲ್ಲೂ ಆಡಿದ್ದರು. ಸಯ್ಯದ್ ಮುಷ್ತಾಕ್ ಆಲಿ ಟೂರ್ನಿಯ ಐದು ಪಂದ್ಯಗಳಲ್ಲಿ ಇಶಾನ್ 13 ವಿಕೆಟ್ ಉರುಳಿಸಿದ್ದರು.
ಆಸ್ಟ್ರೇಲಿಯಾ ಸರಣಿಯ ನೆಟ್ಸ್ ನಲ್ಲಿ ನಾನು ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರಿಗೆ ಬೌಲಿಂಗ್ ಮಾಡಿದ್ದೇನೆ. ವಿಶ್ವದ ಶ್ರೇಷ್ಠ ಬ್ಯಾಟ್ಸ್ ಮೆನ್ ಗಳಿಗೆ ಬೌಲಿಂಗ್ ಮಾಡಿರುವುದು ಹೆಮ್ಮೆ ಅನ್ನಿಸುತ್ತಿದೆ. ಅಲ್ಲದೆ ಸಾಕಷ್ಟು ಕಲಿಯಲು ಕೂಡ ಸಾಧ್ಯವಾಯ್ತು. ರಣಜಿ ಪಂದ್ಯವೊಂದರಲ್ಲಿ ನಾನು ಕೆ.ಎಲ್. ರಾಹುಲ್ ಭಾಯ್ ಅವರ ವಿಕೆಟ್ ಪಡೆದಿದ್ದೆ ಅಂತಾರೆ ಇಶಾನ್ ಪೊರೆಲ್.
ಇನ್ನು ಐಪಿಎಲ್ ನಲ್ಲಿ ನಿಮ್ಮ ಕನಸಿನ ವಿಕೆಟ್ ಯಾರದ್ದು ಅನ್ನೋ ಪ್ರಶ್ನೆಗೆ ವಿರಾಟ್ ಕೊಹ್ಲಿ ಎಂದು ಉತ್ತರಿಸಿದ್ರು. ಯಾಕಂದ್ರೆ, ವಿರಾಟ್ ನಂಬರ್ ವನ್ ಬ್ಯಾಟ್ಸ್ ಮೆನ್. ಅವರ ವಿಕೆಟ್ ಪಡೆಯುವುದು ಕನಸು ಅಂತ ಹೇಳ್ತಾರೆ.
ಇನ್ನು ಇಶಾನ್ ಪೊರೆಲ್ ಸ್ವಲ್ಪ ನತದೃಷ್ಟ ಅಂತನೇ ಹೇಳಬಹುದು. ಗಾಯಗೊಳ್ಳದೇ ಇರುತ್ತಿದ್ರೆ ಟೀಮ್ ಇಂಡಿಯಾಗೂ ಎಂಟ್ರಿಕೊಡುತ್ತಿದ್ರೋ ಏನೋ.. ಯಾಕಂದ್ರೆ, ಆಸ್ಟ್ರೇಲಿಯಾ ಸರಣಿಯ ವೇಳೆ ಭಾರತದ 11 ಮಂದಿ ಆಟಗಾರರು ಗಾಯಗೊಂಡಿದ್ದರು. ಈ ವೇಳೆ ಮಹಮ್ಮದ್ ಸಿರಾಜ್, ನಟರಾಜನ್, ಶಾರ್ದೂಲ್ ಥಾಕೂರ್, ಬಳಿಕ ಪ್ರಸಿದ್ಧ್ ಕೃಷ್ಣ ಟೀಮ್ ಇಂಡಿಯಾ ತಂಡಕ್ಕೆ ಆಯ್ಕೆಯಾಗಿ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದರು.