ವಿರಾಟ್ ಕೊಹ್ಲಿ.. ಟೀಮ್ ಇಂಡಿಯಾದ ಟಿ-20 ತಂಡದ ನಾಯಕನ ಸ್ಥಾನದಿಂದ ಕೆಳಗಿಳಿದಿದ್ದಾರೆ.
ಕಳೆದ ಐದು ವರ್ಷಗಳಿಂದ ಟೀಮ್ ಇಂಡಿಯಾವನ್ನು ಟಿ-ಟ್ವೆಂಟಿ ಪಂದ್ಯಗಳಲ್ಲಿ ಮುನ್ನಡೆಸಿರುವ ಕೊಹ್ಲಿ ನಿರಾಸೆಯಿಂದಲೇ ನಾಯಕಪಟ್ಟವನ್ನು ತ್ಯಜಿಸಿದ್ದಾರೆ.
ವಿಶ್ವ ಕ್ರಿಕೆಟ್ ನ ಅದ್ಭುತ ಆಟಗಾರನಾಗಿರುವ ವಿರಾಟ್ ಕೊಹ್ಲಿ ಟೀಮ್ ಇಂಡಿಯಾದ ಯಶಸ್ವಿ ನಾಯಕ.
ಆದ್ರೆ ಪ್ರತಿಷ್ಠಿತ ಐಸಿಸಿ ಟ್ರೋಫಿಯನ್ನು ಗೆದ್ದಿಲ್ಲ ಅನ್ನೋದು ಬಿಟ್ರೆ ಕೊಹ್ಲಿ ನಾಯಕನಾಗಿ ಸೂಪರ್ ಎಂಬುದರಲ್ಲಿ ಎರಡು ಮಾತಿಲ್ಲ.
2016-17ರಲ್ಲಿ ಟಿ-ಟ್ವೆಂಟಿ ತಂಡದ ನಾಯಕನಾದ ಬಳಿಕ ಕೊಹ್ಲಿ ಸರಣಿ ಸೋತಿದ್ದು ಕೇವಲ ಎರಡು ಮಾತ್ರ.
ಇನ್ನು ಮೂರು ಸರಣಿಗಳಲ್ಲಿ ಸಮಬಲ ಸಾಧಿಸಿದ್ರೆ, 12 ಸರಣಿಗಳನ್ನು ಗೆದ್ದ ಹಿರಿಮೆಗೆ ಕೊಹ್ಲಿ ಪಾತ್ರರಾಗಿದ್ದಾರೆ.
ಅದ್ರಲ್ಲೂ ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ವಿರುದ್ಧ ಕೊಹ್ಲಿ ಸಾರಥ್ಯದಲ್ಲಿ ಟೀಮ್ ಇಂಡಿಯಾ ಸರಣಿಯನ್ನೇ ಸೋತಿಲ್ಲ.

ಅಷ್ಟೇ ಅಲ್ಲ, ನಾಯಕನಾಗಿ ಕೇವಲ 30 ಇನಿಂಗ್ಸ್ ಗಳಲ್ಲಿ ವೇಗದ ಒಂದು ಸಾವಿರ ರನ್ ಗಳಿಸಿದ್ದ ಗೌರವಕ್ಕೂ ವಿರಾಟ್ ಪಾತ್ರರಾಗಿದ್ದಾರೆ.
ಒಟ್ಟಾರೆ, 17 ಟಿ-ಟ್ವೆಂಟಿ ಸರಣಿಗಳಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ್ದ ವಿರಾಟ್ ಕೊಹ್ಲಿ, ಒಂದೇ ಒಂದು ಐಸಿಸಿ ಟ್ರೋಫಿಯನ್ನು ಗೆದ್ದಿಲ್ಲ.
ಇದು ವಿರಾಟ್ ನಾಯಕತ್ವಕ್ಕೆ ಒಂದು ಕಪ್ಪು ಚುಕ್ಕೆ. ಅದನ್ನು ಬಿಟ್ಟು ಒಬ್ಬ ಆಟಗಾರನಾಗಿ, ನಾಯಕನಾಗಿ, ತಂಡಕ್ಕೆ ಆಕ್ರಮಣಕಾರಿ ಪ್ರವೃತ್ತಿಯನ್ನು ಮೈಗೂಡಿಸಿಕೊಳ್ಳುವಂತೆ ಮಾಡಿರುವ ಕೊಹ್ಲಿ ಅದ್ಭುತ ನಾಯಕನಾಗಿಯೂ ಹೊರಹೊಮ್ಮಿದ್ದಾರೆ.
ಒಟ್ಟಾರೆ 50 ಟಿ-20 ಪಂದ್ಯಗಳಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ್ದ ವಿರಾಟ್ ಕೊಹ್ಲಿ, 32 ಪಂದ್ಯಗಳಲ್ಲಿ ಗೆಲುವಿನ ನಗೆ ಚೆಲ್ಲಿದ್ದಾರೆ.
ಇನ್ನುಳಿದ 16 ಪಂದ್ಯಗಳಲ್ಲಿ ಸೋಲು ಅನುಭವಿಸಿದ್ದಾರೆ. ಎರಡು ಪಂದ್ಯಗಳ ಫಲಿತಾಂಶ ಬಂದಿಲ್ಲ.
ಹಾಗೇ ನಾಯಕನಾಗಿ ಒಟ್ಟು 1570 ರನ್ ಗಳಿಸಿರುವ ವಿರಾಟ್, 13 ಅರ್ಧಶತಕಗಳನ್ನು ಸಿಡಿಸಿದ್ದಾರೆ.








