ಸೂರ್ಯಂಗೆ ಟಾರ್ಚ್ ಹಾಕೋಕೆ ಹೋಗಿ ಕೈಸುಟ್ಟುಕೊಂಡ ವಿರಾಟ್
ಸ್ಲೆಡ್ಜಿಂಗ್ ಮಾಡಲು ಹೋಗಿ ಸಣ್ಣವರಾದ ಆರ್ ಸಿಬಿ ನಾಯಕ..!
aಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿರುದ್ಧ ಕೆಲವು ಹಿರಿಯ ಕ್ರಿಕೆಟಿಗರು ಟೀಕೆ ಮಾಡುತ್ತಿದ್ದಾರೆ. ವಿರಾಟ್ ಕೊಹ್ಲಿ ಟೀಮ್ ಇಂಡಿಯಾದಲ್ಲಿ ತನ್ನ ಆಪ್ತರಿಗೆ ಅವಕಾಶ ನೀಡುತ್ತಿದ್ದಾರೆ ಅನ್ನೋ ಆರೋಪವೂ ಕೇಳಿಬರುತ್ತಿದೆ.
ಮುಖ್ಯವಾಗಿ ರೋಹಿತ್ ಶರ್ಮಾ ಅವರನ್ನು ತಂಡದಿಂದ ಕೈಬಿಟ್ಟಿರುವ ಬಗ್ಗೆ ಸಾಕಷ್ಟು ಟೀಕೆಗಳು ಬರುತ್ತಿವೆ.
ವಿರಾಟ್ ಮತ್ತು ರೋಹಿತ್ ಸಂಬಂಧ ಅಷ್ಟಕ್ಕಷ್ಟೇ. ಹೀಗಾಗಿ ಗಾಯದ ನೆಪವೊಡ್ಡಿ ರೋಹಿತ್ ಅವರನ್ನು ತಂಡದಿಂದ ಕೈಬಿಡಲಾಗಿದೆ ಅಂತ ಹೇಳಲಾಗುತ್ತಿದೆ.
ಈ ನಡುವೆ ವಿರಾಟ್ ಕೊಹ್ಲಿ ಮೈದಾನದಲ್ಲಿ ಸ್ಲೆಡ್ಜಿಂಗ್ ಮಾಡಲು ಯತ್ನಿಸಿದ್ದಾರೆ ಅನ್ನೋ ಮಾತು ಕೇಳಿಬರುತ್ತಿದೆ.
ಹೌದು, ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದ ವೇಳೆ ವಿರಾಟ್ ಕೊಹ್ಲಿ ಎದುರಾಳಿ ಬ್ಯಾಟ್ಸ್ ಮೆನ್ ನನ್ನು ಅಣಕಿಸುವ ಪ್ರಯತ್ನ ಮಾಡಿರುವುದು ಗೊತ್ತಾಗುತ್ತಿದೆ.
ಮುಂಬೈ ಇಂಡಿಯನ್ಸ್ ತಂಡದ ಬ್ಯಾಟ್ಸ್ ಮೆನ್ ಸೂರ್ಯಕುಮಾರ್ ಯಾದವ್ ಏಕಾಂಗಿ ಹೋರಾಟ ನಡೆಸಿ ತಂಡಕ್ಕೆ ಗೆಲುವನ್ನು ತಂದುಕೊಟ್ಟಿದ್ದರು.
ಭರ್ಜರಿಯಾಗಿ ಬ್ಯಾಟ್ ಬೀಸುತ್ತಿದ್ದ ಸೂರ್ಯಕುಮಾರ್ ಯಾದವ್ ಅವರ ತಾಳ್ಮೆಯನ್ನು ಪರೀಕ್ಷೆ ಮಾಡಲು ವಿರಾಟ್ ಕೊಹ್ಲಿ ಮುಂದಾಗಿದ್ದಾರೆ.
ತನ್ನ ಪವರ್ ಫುಲ್ ಆಟದ ಮೂಲಕ ಆರ್ ಸಿಬಿಗೆ ಸೂರ್ಯಕುಮಾರ್ ಯಾದವ್ ಕಂಟಕವಾಗಿ ಪರಿಣಮಿಸುತ್ತಿದ್ದರು.
ಡೇಲ್ ಸ್ಟೇನ್ ಎಸೆತದಲ್ಲಿ ಸೂರ್ಯಕುಮಾರ್ ಬಾರಿಸಿದ ಚೆಂಡನ್ನು ವಿರಾಟ್ ಕೊಹ್ಲಿ ಕೈಯಲ್ಲಿ ಹಿಡಿದುಕೊಂಡು ಸೂರ್ಯಕುಮಾರ್ ಯಾದವ್ ಅವರ ಸನೀಹಕ್ಕೆ ಬಂದು ಮಾತನಾಡುತ್ತಿದ್ದರು.
ಆಗ ಸೂರ್ಯಕುಮಾರ್ ಯಾದವ್ ಕೂಡ ಸುಮ್ಮನೆ ಕೂರಲಿಲ್ಲ. ವಿರಾಟ್ ಕೊಹ್ಲಿಯವರನ್ನು ದಿಟ್ಟಿಸಿಕೊಂಡು ನೋಡುತ್ತಿದ್ದರು. ವಿರಾಟ್ ಮನಸಲ್ಲೇ ಮಾತನಾಡಿಕೊಂಡು ಏನೇನೋ ಹೇಳುತ್ತಿದ್ದರು. ಆದ್ರೆ ಸೂರ್ಯ ಕುಮಾರ್ ಯಾದವ್ ಸುಮ್ಮನೆ ಕೇಳಿಸಿಕೊಂಡು ತಮ್ಮ ಪಾಡಿಗೆ ತಾವು ನಿಂತಿದ್ದರು. ವಿರಾಟ್ ಕೊಹ್ಲಿ ಪಕ್ಕದಲ್ಲಿ ಬಂದು ಮಾತನಾಡುತ್ತಿದ್ರೂ ಏನು ಹೇಳದೇ ನಾನ್ ಸ್ಟ್ರೈಕರ್ ನತ್ತ ಹೆಜ್ಜೆ ಹಾಕಿದ್ದರು.
ಆದ್ರೆ ವಿರಾಟ್ ಕೊಹ್ಲಿಯ ವರ್ತನೆ ಎಷ್ಟರ ಮಟ್ಟಿಗೆ ಸರಿ ಅನ್ನೋ ಪ್ರಶ್ನೆ ಕೂಡ ಕಾಡುತ್ತಿದೆ. ಈ ಹಿಂದೆ ವಿರಾಟ್ ಕೊಹ್ಲಿ ಗೌತಮ್ ಗಂಭೀರ್ ಜೊತೆಗೂ ಗಲಾಟೆ ಮಾಡಿಕೊಂಡಿದ್ದರು. ಐಪಿಎಲ್ ಸೇರಿದಂತೆ ಇನ್ನಿತರ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಕೊಹ್ಲಿ ಸೈಲೆಂಟಾಗಿ ಸ್ಲೆಡ್ಜಿಂಗ್ ಮಾಡುತ್ತಿರುವುದು ಗೊತ್ತಿಲ್ಲದ ವಿಚಾರವೇನೂ ಅಲ್ಲ.
ಆದ್ರೆ ಐಪಿಎಲ್ ನಲ್ಲಿ ತಮ್ಮವರ ಜೊತೆಗೆ ಅದು ಕೂಡ ಯುವ ಬ್ಯಾಟ್ಸ್ ಮೆನ್ ಗಳ ಜೊತೆ ಸ್ಲೆಡ್ಜಿಂಗ್ ಮಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ ?
ಇನ್ನು ಸೂರ್ಯಕುಮಾರ್ ಯಾದವ್ ಗೆ ಟೀಮ್ ಇಂಡಿಯಾದಲ್ಲಿ ಸ್ಥಾನ ಸಿಕ್ಕಿಲ್ಲ. ಈ ಬೇಸರ ನೋವು ಅವರಲ್ಲೂ ಇದೆ. ಹೀಗಾಗಿಯೇ ರೊಚ್ಚಿಗೆದ್ದು ಆಟವಾಡುತ್ತಿದ್ದಾರೆ.
ಅದು ಅಲ್ಲದೆ ಪಂದ್ಯ ಮುಗಿದ ಬಳಿಕ ಸೂರ್ಯಕುಮಾರ್ ಯಾದವ್ ನಾನು ಇದ್ದೇನೆ.. ಕೂಲ್ ಆಗಿರಿ.. ಅಂತ ಪೆವಿಲಿಯನ್‍ನತ್ತ ಸನ್ನೆ ಮಾಡಿ ತೋರಿಸುತ್ತಿದ್ದಾರೆ.
ಒಟ್ಟಿನಲ್ಲಿ ವಿರಾಟ್ ಕೊಹ್ಲಿ ಮಾಡಿರುವ ಸ್ಲೆಡ್ಜಿಂಗ್‍ಗೆ ಸೂರ್ಯಕುಮಾರ್ ಯಾದವ್ ಕೂಡ ಸರಿಯಾದ ಉತ್ತರವನ್ನೇ ನೀಡಿದ್ದಾರೆ.
ಆದ್ರೆ ಇಲ್ಲಿ ಸಣ್ಣವರಾಗಿದ್ದು ವಿರಾಟ್ ಕೊಹ್ಲಿ. ಯುವ ಆಟಗಾರನ ಆಟವನ್ನು ಮೆಚ್ಚಿಕೊಳ್ಳುವುದರ ಬದಲು ಅವರನ್ನು ಸ್ಲೆಡ್ಜಿಂಗ್ ಮೂಲಕ ಕುಗ್ಗುವಂತೆ ಮಾಡುವುದು ಸರಿಯಲ್ಲ. ಒಂದು ವೇಳೆ ಸೂರ್ಯಕುಮಾರ್ ಯಾದವ್ ಕೂಡ ಮಾತಿಗೆ ಮಾತು ಬೆಳೆಸುತ್ತಿದ್ರೆ ವಿರಾಟ್ ಕೊಹ್ಲಿಯ ನಾಯಕತ್ವಕ್ಕೆ ಮತ್ತು ಇಮೇಜ್‍ಗೆ ದಕ್ಕೆಯಾಗುತ್ತಿತ್ತು.
ನಾಯಕನಾದವನು ಎಷ್ಟೇ ಆಕ್ರಮಣಕಾರಿ ಪ್ರವೃತ್ತಿಯಾಗಿದ್ರೂ ಕೂಡ ಅದನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳಬೇಕು. ವಿರಾಟ್ ಕೊಹ್ಲಿ ಅದ್ಭುತವಾಗಿ ಆಡುತ್ತಾರೆ. ರನ್ ಮೇಷಿನ್, ದಾಖಲೆ ವೀರ ಹೀಗೆ ನಾನಾ ರೀತಿಯ ಗೌರವಗಳು ಇವೆ. ಆದ್ರೆ ವಿರಾಟ್ ತನ್ನತನವನ್ನು ಉಳಿಸಿಕೊಂಡು ಇತರರಿಗೆ ಮಾದರಿಯಾಗಬೇಕು. ಬಹುಶಃ ವಿರಾಟ್ ಅದನ್ನು ಮೆರೆತಿದ್ದಾರೆ.








