ಅಲುಗಾಡುತ್ತಿದೆ’ ವಿರಾಟ್ `ಟೆಸ್ಟ್ ನಾಯಕನ ಪಟ್ಟ’
ಕಿಂಗ್ ವಿರಾಟ್ ಕೊಹ್ಲಿ ಬಳಿಯಿದ್ದ ಟೀಂ ಇಂಡಿಯಾ ಏಕದಿನ ಕ್ರಿಕೆಟ್ ತಂಡದ ನಾಯಕತ್ವದ ಕಿರೀಟವನ್ನು ಬಿಸಿಸಿಐ ರೋಹಿತ್ ಶರ್ಮಾ ಮುಡಿಗೇರಿಸಿದೆ. ಆ ಮೂಲಕ ಸೀಮಿತ ಓವರ್ ಗಳ ನಾಯಕತ್ವವನ್ನು ಸಂಪೂರ್ಣವಾಗಿ ರೋಹಿತ್ ಗೆ ನೀಡಲಾಗಿದೆ. ಇನ್ಮುಂದೆ ವಿರಾಟ್ ಟೆಸ್ಟ್ ತಂಡದ ನಾಯಕರಾಗಿ ಮಾತ್ರ ಇರಲಿದ್ದಾರೆ. ಈ ಮಧ್ಯೆ ಬಿಸಿಸಿಐ ಬಿಗ್ ಬಾಸ್ ಗಳು ವಿರಾಟ್ ಕೊಹ್ಲಿ ಅವರನ್ನು ಟೆಸ್ಟ್ ತಂಡದ ನಾಯಕತ್ವದಿಂದ ಕೆಳಗಿಸುವ ಚಿಂತನೆಯಲ್ಲಿದೆಯಲ್ಲಿದ್ದಾರಂತೆ. ಆ ಚಿಂತನೆಯನ್ನು ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ರಣತಂತ್ರವನ್ನು ಕೂಡ ರೂಪಿಸುತ್ತಿದ್ದಾರಂತೆ. ಇದೇ ಕಾರಣಕ್ಕಾಗಿಯೇ ರೋಹಿತ್ ಶರ್ಮಾ ಅವರನ್ನು ಟೆಸ್ಟ್ ತಂಡದ ಉಪನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ಆದ್ರೆ ಟಿ 20, ಏಕದಿನದಂತೆ ಟೆಸ್ಟ್ ಕ್ಯಾಪ್ಟನ್ಸಿಯನ್ನು ವಿರಾಟ್ ರಿಂದ ಕಿತ್ತುಕೊಳ್ಳುವುದು ಅಷ್ಟು ಸುಲಭವಲ್ಲ. ಯಾಕಂದ್ರೆ ಟಿ-20 ಮತ್ತು ಏಕದಿನ ಕ್ರಿಕೆಟ್ ಮಾದರಿಯಲ್ಲಿ ವಿರಾಟ್ ಗೆ ಪರ್ಯಾಯವಾಗಿ ರೋಹಿತ್ ಶರ್ಮಾ ಇದ್ದರು. ಹೀಗಾಗಿ ವಿರಾಟ್ ಕೊಹ್ಲಿ ಅವರಿಂದ ನಾಯಕತ್ವವನ್ನು ಸುಲಭವಾಗಿ ಹಿಂಪಡೆಯಲಾಗಿದೆ. ಆದ್ರೆ ಟೆಸ್ಟ್ ತಂಡದ ಕಹಾನಿಯೇ ಬೇರೆಯದ್ದಾಗಿದೆ.
ಹೌದು..! ವಿರಾಟ್ ಕೊಹ್ಲಿಯ ಟೆಸ್ಟ್ ಕ್ಯಾಪ್ಟನ್ಸಿ ಬಗ್ಗೆ ಯಾರು ಮಾತನಾಡುವ ಸ್ಥಾನದಲ್ಲಿಯೇ ಇಲ್ಲ. ಭಾರತದ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತ್ಯುತ್ತಮ ನಾಯಕ ವಿರಾಟ್ ಕೊಹ್ಲಿ. ದೇಶ ವಿದೇಶಗಳಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸುತ್ತಿದೆ ಅಂದ್ರೆ ಅದಕ್ಕೆ ಪ್ರಮುಖ ಕಾರಣ ವಿರಾಟ್ ಕೊಹ್ಲಿ ನಾಯಕತ್ವ. ಇದನ್ನು ಯಾರು ಅಲ್ಲಗೆಳೆಯುವಂತಿಲ್ಲ. ಇನ್ನು ಬ್ಯಾಟಿಂಗ್ ವಿಚಾರಕ್ಕೆ ಬಂದರೇ ವಿರಾಟ್ ರ ದಾಖಲೆಗಳೇ ಅದಕ್ಕೆ ಉತ್ತರವಾಗಿವೆ. ಎಲ್ಲ ರೀತಿಯಿಂದಲೂ ಕೊಹ್ಲಿಯ ಟೆಸ್ಟ್ ನಾಯಕತ್ವ ಸೇಫ್ ಆಗಿದೆ.
ಆದ್ರೆ ಈಗ ವಿರಾಟ್ ನೆತ್ತಿಯ ಮೇಲೆ ತೂಗುಗತ್ತಿ ಇದೆ. ಮೊನ್ನೆಯವರೆಗೂ ರೋಹಿತ್ ಶರ್ಮಾ ಟೆಸ್ಟ್ ತಂಡ ಖಾಯಂ ಸದಸ್ಯನೂ ಆಗಿರಲಿಲ್ಲ. ರೋಹಿತ್ ತಮ್ಮ ಸ್ಥಾನವನ್ನು ಗಟ್ಟಿ ಮಾಡಿಕೊಳ್ಳುವ ತವಕದಲ್ಲಿದ್ದರು. ಆದ್ರೀಗ ಆ ಹೆಜ್ಜೆಯನ್ನು ಮೀರಿ ಉಪನಾಯಕನ ಸ್ಥಾನದಲ್ಲಿದ್ದಾರೆ. ಆ ಮೂಲಕ ಬಿಸಿಸಿಐ ಬಿಗ್ ಬಾಸ್ ಗಳು ವಿರಾಟ್ ಗೆ ಎಚ್ಚರಿಕೆಯ ಸಂದೇಶವನ್ನು ರವಾಸಿದ್ದಾರೆ.









