ಬೆಂಗಳೂರು: ಬರೋಬ್ಬರಿ 15 ವರ್ಷಗಳ ಸುದೀರ್ಘ ಅವಧಿಯ ಬಳಿಕ ದೇಶೀಯ ಕ್ರಿಕೆಟ್ ಅಂಗಳಕ್ಕೆ ಕಾಲಿಟ್ಟ ರನ್ ಮೆಷಿನ್ ವಿರಾಟ್ ಕೊಹ್ಲಿ, ತಮ್ಮ ಬ್ಯಾಟಿಂಗ್ ವೈಭವವನ್ನು ಪ್ರದರ್ಶಿಸುವ ಮೂಲಕ ಅಭಿಮಾನಿಗಳಿಗೆ ರಸದೌತಣ ನೀಡಿದ್ದಾರೆ. ವಿಜಯ್ ಹಜಾರೆ ಟ್ರೋಫಿಯಲ್ಲಿ ಆಂಧ್ರಪ್ರದೇಶದ ವಿರುದ್ಧ ಕಣಕ್ಕಿಳಿದ ಕೊಹ್ಲಿ, ಕೇವಲ ಶತಕ ಸಿಡಿಸಿ ಮಿಂಚಿದ್ದಲ್ಲದೆ, ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ಹೆಸರಲ್ಲಿದ್ದ ಬೃಹತ್ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
ಕ್ರಿಕೆಟ್ ದೇವರ ದಾಖಲೆ ಅಳಿಸಿದ ಚೇಸಿಂಗ್ ಕಿಂಗ್
ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ ಮೈದಾನದಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಬ್ಯಾಟಿಂಗ್‌ಗೆ ಇಳಿಯುತ್ತಿದ್ದಂತೆ ಇತಿಹಾಸ ನಿರ್ಮಾಣವಾಯಿತು. ತಮ್ಮ ಇನಿಂಗ್ಸ್‌ನ ಮೊದಲ ರನ್ ಗಳಿಸುತ್ತಿದ್ದಂತೆಯೇ, ಲಿಸ್ಟ್ ಎ ಕ್ರಿಕೆಟ್ ಇತಿಹಾಸದಲ್ಲಿ 16,000 ರನ್ ಪೂರೈಸಿದ ಭಾರತದ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಆದರೆ ಇಲ್ಲಿ ಪ್ರಮುಖವಾದ ಸಂಗತಿಯೆಂದರೆ ಅವರು ಈ ಮೈಲಿಗಲ್ಲು ತಲುಪಿದ ವೇಗ ಮತ್ತು ಕಾಯ್ದುಕೊಂಡಿರುವ ಸರಾಸರಿ.
ಈ ಹಿಂದೆ ಸಚಿನ್ ತೆಂಡೂಲ್ಕರ್ ಅವರು ಲಿಸ್ಟ್ ಎ ಕ್ರಿಕೆಟ್‌ನಲ್ಲಿ 16 ಸಾವಿರ ರನ್ ಗಳಿಸಿದವರ ಪೈಕಿ ಅತ್ಯುತ್ತಮ ಸರಾಸರಿ ಹೊಂದಿದ ಬ್ಯಾಟರ್ ಆಗಿದ್ದರು. ಇದೀಗ ಆ ಕಿರೀಟ ವಿರಾಟ್ ಮುಡಿಗೇರಿದೆ. ಸಚಿನ್ ತೆಂಡೂಲ್ಕರ್ ಅವರು 16 ಸಾವಿರ ರನ್‌ಗಳ ಗಡಿಯನ್ನು ತಲುಪಲು 391 ಇನ್ನಿಂಗ್ಸ್‌ಗಳನ್ನು ತೆಗೆದುಕೊಂಡಿದ್ದರೆ, ವಿರಾಟ್ ಕೊಹ್ಲಿ ಕೇವಲ 330 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡುವ ಮೂಲಕ ಅತಿ ವೇಗವಾಗಿ ಈ ಮೈಲಿಗಲ್ಲು ತಲುಪಿದ ವಿಶ್ವದಾಖಲೆ ಬರೆದಿದ್ದಾರೆ.
ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಸರಾಸರಿಯ ಸರದಾರ
ವಿಶ್ವ ಕ್ರಿಕೆಟ್‌ನಲ್ಲಿ ಲಿಸ್ಟ್ ಎ ಮಾದರಿಯಲ್ಲಿ 16,000 ಕ್ಕೂ ಹೆಚ್ಚು ರನ್ ಗಳಿಸಿರುವ 9 ಮಂದಿ ದಿಗ್ಗಜ ಆಟಗಾರರ ಪಟ್ಟಿಯಲ್ಲಿ 50 ಕ್ಕಿಂತ ಹೆಚ್ಚು ಸರಾಸರಿ ಹೊಂದಿರುವ ವಿಶ್ವದ ಏಕೈಕ ಆಟಗಾರ ವಿರಾಟ್ ಕೊಹ್ಲಿ ಎಂಬುದು ಅವರ ಶ್ರೇಷ್ಠತೆಗೆ ಸಾಕ್ಷಿಯಾಗಿದೆ.
ಕೊಹ್ಲಿ ಪ್ರಸ್ತುತ 57.34ರ ಸರಾಸರಿ ಹೊಂದಿದ್ದರೆ, ಎರಡನೇ ಸ್ಥಾನದಲ್ಲಿರುವ ಸಚಿನ್ ತೆಂಡೂಲ್ಕರ್ 45.54 ಸರಾಸರಿ ಹೊಂದಿದ್ದಾರೆ. ಕುಮಾರ್ ಸಂಗಕ್ಕಾರ, ವಿವ್ ರಿಚರ್ಡ್ಸ್ ಮತ್ತು ರಿಕಿ ಪಾಂಟಿಂಗ್ ಅವರಂತಹ ದಂತಕಥೆಗಳನ್ನೂ ಹಿಂದಿಕ್ಕಿ ಕೊಹ್ಲಿ ಅಗ್ರಸ್ಥಾನದಲ್ಲಿ ವಿರಾಜಮಾನರಾಗಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲೂ 8 ಸಾವಿರದಿಂದ 14 ಸಾವಿರದವರೆಗಿನ ರನ್ ಮೈಲಿಗಲ್ಲುಗಳನ್ನು ಅತಿ ವೇಗವಾಗಿ ಕ್ರಮಿಸಿದ ಕೀರ್ತಿ ಕೊಹ್ಲಿಗಿದೆ.
ಶತಕದೊಂದಿಗೆ ದಿಲ್ಲಿಗೆ ಗೆಲುವು ತಂದುಕೊಟ್ಟ ವಿರಾಟ್
ಆಂಧ್ರಪ್ರದೇಶ ನೀಡಿದ್ದ 299 ರನ್‌ಗಳ ಗುರಿಯನ್ನು ಬೆನ್ನಟ್ಟಿದ ದಿಲ್ಲಿ ತಂಡಕ್ಕೆ ವಿರಾಟ್ ಕೊಹ್ಲಿ ಆಸರೆಯಾದರು. ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾದ ಕೊಹ್ಲಿ, ಮೈದಾನದ ಮೂಲೆ ಮೂಲೆಗೂ ಚೆಂಡನ್ನು ಅಟ್ಟಿದರು. ಕೇವಲ 100 ಎಸೆತಗಳನ್ನು ಎದುರಿಸಿದ ಅವರು 14 ಆಕರ್ಷಕ ಬೌಂಡರಿ ಹಾಗೂ 3 ಭರ್ಜರಿ ಸಿಕ್ಸರ್‌ಗಳ ನೆರವಿನಿಂದ 131 ರನ್ ಸಿಡಿಸಿ ಔಟಾದರು.
ಇವರಿಗೆ ಉತ್ತಮ ಸಾಥ್ ನೀಡಿದ ಆರಂಭಿಕ ಆಟಗಾರ ಪ್ರಿಯಾಂಶ್ ಆರ್ಯ 44 ಎಸೆತಗಳಲ್ಲಿ 74 ರನ್ ಸಿಡಿಸಿದರೆ, ನಿತೀಶ್ ರಾಣಾ 56 ಎಸೆತಗಳಲ್ಲಿ 77 ರನ್ ಬಾರಿಸಿದರು. ಕೊಹ್ಲಿ ಎರಡನೇ ವಿಕೆಟ್‌ಗೆ ಪ್ರಿಯಾಂಶ್ ಜೊತೆ 113 ರನ್ ಮತ್ತು ಮೂರನೇ ವಿಕೆಟ್‌ಗೆ ನಿತೀಶ್ ರಾಣಾ ಜೊತೆ 159 ರನ್‌ಗಳ ಜೊತೆಯಾಟವಾಡಿ ತಂಡದ ಗೆಲುವನ್ನು ಸುಲಭಗೊಳಿಸಿದರು. ದಿಲ್ಲಿ ತಂಡ ಇನ್ನೂ 12.2 ಓವರ್‌ಗಳು ಬಾಕಿ ಇರುವಂತೆಯೇ 6 ವಿಕೆಟ್ ನಷ್ಟಕ್ಕೆ 300 ರನ್ ಗಳಿಸಿ ಭರ್ಜರಿ ಜಯ ಸಾಧಿಸಿತು.
ಆಂಧ್ರ ಪರ ರಿಕಿ ಭೂಯಿ ಏಕಾಂಗಿ ಹೋರಾಟ, ಸಿಮರ್‌ಜೀತ್‌ಗೆ ಒಲಿದ ಪಂದ್ಯಶ್ರೇಷ್ಠ
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಆಂಧ್ರಪ್ರದೇಶ ತಂಡಕ್ಕೆ ರಿಕಿ ಭೂಯಿ ಆಸರೆಯಾದರು. 105 ಎಸೆತಗಳಲ್ಲಿ 122 ರನ್ ಸಿಡಿಸುವ ಮೂಲಕ ತಂಡ ಗೌರವಯುತ ಮೊತ್ತ ಕಲೆಹಾಕಲು ಕಾರಣರಾದರು. ಆದರೆ ದಿಲ್ಲಿಯ ವೇಗಿ ಸಿಮರ್ ಜೀತ್ ಸಿಂಗ್ ಅವರ ಮಾರಕ ದಾಳಿಗೆ (54 ಕ್ಕೆ 5 ವಿಕೆಟ್) ಆಂಧ್ರ ತತ್ತರಿಸಿತು. ಅಂತಿಮವಾಗಿ 5 ವಿಕೆಟ್ ಪಡೆದ ಸಿಮರ್ ಜೀತ್ ಸಿಂಗ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಸಂಕ್ಷಿಪ್ತ ಸ್ಕೋರ್
ಆಂಧ್ರ ಪ್ರದೇಶ: 50 ಓವರ್‌ಗಳಲ್ಲಿ 298/8
(ರಿಕಿ ಭೂಯಿ 122, ಶೇಖ್ ರಶೀದ್ 31, ಸಿಮರ್ ಜೀತ್ ಸಿಂಗ್ 5/54, ಪ್ರಿನ್ಸ್ ಯಾದವ್ 3/50)
ದಿಲ್ಲಿ: 37.4 ಓವರ್‌ಗಳಲ್ಲಿ 300/6
(ವಿರಾಟ್ ಕೊಹ್ಲಿ 131, ನಿತೀಶ್ ರಾಣಾ 77, ಪ್ರಿಯಾಂಶ್ ಆರ್ಯ 74, ಹೇಮಂತ್ ರೆಡ್ಡಿ 2/6)
ಫಲಿತಾಂಶ: ದಿಲ್ಲಿ ತಂಡಕ್ಕೆ 4 ವಿಕೆಟ್‌ಗಳ ಭರ್ಜರಿ ಜಯ.








