ರಿಷಬ್ ಪಂತ್… ಟೀಮ್ ಇಂಡಿಯಾದ ಭವಿಷ್ಯದ ಸೂಪರ್ ಸ್ಟಾರ್..!
ರಿಷಬ್ ಪಂತ್… ಟೀಮ್ ಇಂಡಿಯಾದ ಗೇಮ್ ಚೇಂಜರ್.. ಮ್ಯಾಚ್ ವಿನ್ನರ್… ಭವಿಷ್ಯದ ಸೂಪರ್ ಸ್ಟಾರ್..
ಹಾಗಂತ ವಿಶ್ವ ಕ್ರಿಕೆಟ್ ನ ಮಹಾ ಪಂಡಿತರು ರಿಷಬ್ ಪಂತ್ ಅವರ ಬ್ಯಾಟಿಂಗ್ ವೈಖರಿಯನ್ನು ನೋಡಿ ಭವಿಷ್ಯ ನುಡಿಯುತ್ತಿದ್ದಾರೆ.
ಹಾಗೇ ನೋಡಿದ್ರೆ, ರಿಷಬ್ ಪಂತ್ ತನ್ನ ಪ್ರತಿಭೆ ಮತ್ತು ಸಾಮಥ್ರ್ಯವನ್ನು ಈಗಾಗಲೇ ಸಾಬೀತುಪಡಿಸಿದ್ದಾರೆ. ವಿವಿಧ ವಯೋಮಿತಿ ಕ್ರಿಕೆಟ್ ಟೂರ್ನಿಯಲ್ಲಿ ಹಲವಾರು ದಾಖಲೆಗಳನ್ನು ಬರೆದಿರುವ ರಿಷಬ್ ಪಂತ್ 2017ರಲ್ಲೇ ಟೀಮ್ ಇಂಡಿಯಾವನ್ನು ಸೇರಿಕೊಂಡಿದ್ದರು. ಟಿ-ಟ್ವೆಂಟಿ, ಟೆಸ್ಟ್ ಕ್ರಿಕೆಟ್ ಹಾಗೂ ಏಕದಿನ ಕ್ರಿಕೆಟ್ ಗೆ ಎಂಟ್ರಿಕೊಟ್ಟಿದ್ದ ಪಂತ್ ಆರಂಭದಲ್ಲಿ ಸಾಕಷ್ಟು ಭರವಸೆ ಮೂಡಿಸಿದ್ದರು.
ಆದ್ರೆ ವಿಕೆಟ್ ಕೀಪಿಂಗ್ ಟೆಕ್ನಿಕ್ ಮತ್ತು ಬ್ಯಾಟಿಂಗ್ ಫಾರ್ಮ್ ಕಳೆದುಕೊಂಡಾಗ ರಿಷಬ್ ಪಂತ್ ಭವಿಷ್ಯ ಕೂಡ ಮುಗಿದು ಹೋಯ್ತು ಅಂತ ಅಂದುಕೊಂಡಿದ್ದರು.
ಆದ್ರೆ ರಿಷಬ್ ಪಂತ್ ಹಠ ಬಿಡಲಿಲ್ಲ. ಟೀಮ್ ಇಂಡಿಯಾದಿಂದ ದೂರ ಉಳಿದ್ರೂ ಮತ್ತೆ ತಂಡವನ್ನು ಸೇರಿಕೊಂಡ್ರು. ಐಪಿಎಲ್ ಮತ್ತು ದೇಸಿ ಕ್ರಿಕೆಟ್ ನಲ್ಲಿ ಉತ್ತಮ ಪ್ರದರ್ಶನ ನೀಡಿ ಆಯ್ಕೆಗಾರರ ಗಮನ ಕೂಡ ಸೆಳೆದಿದ್ದರು.
ಈ ನಡುವೆ, ಐಪಿಎಲ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೇರಿಕೊಂಡ ನಂತರ ರಿಷಬ್ ಪಂತ್ ಕ್ರಿಕೆಟ್ ಹಾದಿಗೆ ಹೊಸ ದಿಕ್ಕು ಸಿಕ್ಕಿತ್ತು. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮೆಂಟರ್ ಸೌರವ್ ಗಂಗೂಲಿ, ಹೆಡ್ ಕೋಚ್ ರಿಕಿ ಪಾಂಟಿಂಗ್ ಗರಡಿಯಲ್ಲಿ ಪಳಗಿದ ಪಂತ್ ತನ್ನ ಆಟದಲ್ಲೂ ಸಾಕಷ್ಟು ಸುಧಾರಣೆ ಮಾಡಿಕೊಂಡ್ರು.
ಕಳೆದ ಐಪಿಎಲ್ ನಲ್ಲಿ ಸಾಧಾರಣ ಮಟ್ಟದ ಪ್ರದರ್ಶನ ನೀಡಿದ್ದ ರಿಷಬ್ ಪಂತ್ ಆಸ್ಟ್ರೇಲಿಯಾ ಟೆಸ್ಟ್ ಸರಣಿಗೆ ಆಯ್ಕೆಯಾದ್ರು. ಬಳಿಕ ಹಿಂತಿರುಗಿ ನೋಡಲೇ ಇಲ್ಲ.
ಟೆಸ್ಟ್ ಕ್ರಿಕೆಟ್ ನಲ್ಲಿ ಭಾರತ ತಂಡದ ಮನಸ್ಥೈರ್ಯವನ್ನೇ ಬದಲಾಯಿಸುವಂತೆ ಮಾಡಿದ್ದು ಕೂಡ ರಿಷಬ್ ಪಂತ್. ಸ್ಪೋಟಕ ಬ್ಯಾಟಿಂಗ್ ಮೂಲಕ ಪಂದ್ಯದ ಗತಿಯನ್ನು ಬದಲಾಯಿಸಿದ್ದು ಅಲ್ಲದೆ ಮ್ಯಾಚ್ ವಿನ್ನರ್ ಆಗಿಯೂ ಹೊರಹೊಮ್ಮಿದ್ರು. ಅಷ್ಟೇ ಅಲ್ಲ, ಟೀಮ್ ಇಂಡಿಯಾದ ಮೂರು ಮಾದರಿಯ ಕ್ರಿಕೆಟ್ ನಲ್ಲೂ ತಂಡದಲ್ಲಿ ಸ್ಥಾನ ಪಡೆದುಕೊಳ್ಳುವಲ್ಲಿ ಯಶಸ್ವಿಯಾದ್ರು.
ಬಳಿಕ ಇಂಗ್ಲೆಂಡ್ ವಿರುದ್ಧದ ಟೆಸ್ಟ್, ಟಿ-ಟ್ವೆಂಟಿ ಮತ್ತು ಏಕದಿನ ಪಂದ್ಯಗಳಲ್ಲೂ ಅದ್ಭುತವಾದ ಪ್ರದರ್ಶನವನ್ನು ನೀಡಿದ್ದರು. ಜೇಮ್ಸ್ ಆಂಡರ್ಸನ್, ಜೋಫ್ರಾ ಆರ್ಚೆರ್ ಅವರ ವೇಗದ ಎಸೆತಗಳಿಗೂ ರಿವರ್ಸ್ ಸ್ಕೂಪ್ ಹೊಡೆಯುವ ಮೂಲಕ ಕ್ರಿಕೆಟ್ ಜಗತ್ತನ್ನೇ ದಂಗುಬಡಿಸಿದ್ರು.
ಆದ್ರೆ ರಿಷಬ್ ಪಂತ್ ಇನ್ನೂ ಸಾಕಷ್ಟು ಕಲಿಯಬೇಕಿದೆ. ರಿಷಬ್ ಪಂತ್ ಅತ್ಯುತ್ತಮವಾಗಿ ಬ್ಯಾಟ್ ಮಾಡುತ್ತಲೇ ಕೆಟ್ಟ ಹೊಡೆತಗಳಿಗೆ ಮುಂದಾಗಿ ವಿಕೆಟ್ ಕೈಚೆಲ್ಲಿಕೊಳ್ಳುತ್ತಿದ್ದಾರೆ.
ಈ ಬಗ್ಗೆ ಸಾಕಷ್ಟು ಆಟಗಾರರು ಸಲಹೆಗಳನ್ನು ಕೂಡ ನೀಡಿದ್ದಾರೆ. ಇನ್ನೊಂದೆಡೆ ರಿಷಬ್ ಪಂತ್ ತನ್ನ ಆಟದಲ್ಲಿ ಸುಧಾರಣೆ ಮಾಡಿಕೊಂಡಿರುವ ಬಗ್ಗೆ ರವಿಶಾಸ್ತ್ರಿ ಮನಸಾರೆ ಹೊಗಳಿದ್ದಾರೆ. ಪಂತ್ ಹುಡಗಾಟವನ್ನು ಬಿಟ್ಟು ಕ್ರಿಕೆಟ್ ಆಟದತ್ತ ಸಾಕಷ್ಟು ಆದ್ಯತೆಯನ್ನು ನೀಡಿದ್ದಾರೆ. ಜೊತೆಗೆ ಕಠಿಣ ಪರಿಶ್ರಮವನ್ನು ಪಟ್ಟಿದ್ದಾರೆ ಅಂತ ರವಿ ಶಾಸ್ತ್ರಿ ಹೇಳಿದ್ದಾರೆ.
ಇಂಗ್ಲೆಂಡ್ ನ ಇಯಾನ್ ಬೆಲ್, ರಿಷಬ್ ಪಂತ್ ಇಲ್ಲದ ಟೀಮ್ ಇಂಡಿಯಾವನ್ನು ಊಹೆ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.
ಇನ್ನು ಸೆಹ್ವಾಗ್ ಭವಿಷ್ಯದ ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಅಂತ ಬಣ್ಣನೆ ಮಾಡಿದ್ದಾರೆ. ಪಾಕ್ ನ ಮಾಜಿ ನಾಯಕ ಇಂಜಮಮ್ ಉಲ್, ಸುನೀಲ್ ಗವಾಸ್ಕರ್, ಆಕಾಶ್ ಚೋಪ್ರಾ ಸೇರಿದಂತೆ ಹಲವಾರು ಕ್ರಿಕೆಟ್ ದಿಗ್ಗಜರು ಪಂತ್ ಬ್ಯಾಟಿಂಗ್ ವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ಸಾರೆ.
ಇನ್ನೊಂದೆಡೆ ರಿಷಬ್ ಪಂತ್ ಸಾಕಷ್ಟು ಕಲಿಯುವುದಿದೆ. ಇನಿಂಗ್ಸ್ ಪೂರ್ತಿ ಆಡುವ ಕಲೆಯನ್ನು ಮೈಗೂಡಿಸಿಕೊಳ್ಳಬೇಕು. 70-80 ರನ್ ದಾಖಲಿಸಿದ್ದಾಗ ಅದನ್ನು ಶತಕವನ್ನಾಗಿ ಪರಿವರ್ತಿಸಬೇಕು. ಬುದ್ಧಿವಂತಿಕೆಯ ಆಟವಾಡುತ್ತಲೇ ವಿಕೆಟ್ ಕೈಚೆಲ್ಲಿಕೊಳ್ಳದಂತೆ ನೋಡಬೇಕು. ಹೀಗೆ ಆಟದಲ್ಲಿ ಪ್ರಬುದ್ಧತೆಯನ್ನು ಮೈಗೂಡಿಸಿಕೊಂಡಾಗ ಖಂಡಿತವಾಗಿಯೂ ರಿಷಬ್ ಪಂತ್ ಧೋನಿಗಿಂತಲೂ ಒಂದು ಹೆಜ್ಜೆ ಮುಂದೆ ಸಾಗಬಹುದು. ಟೀಮ್ ಇಂಡಿಯಾದ ರನ್ ಮೇಷಿನ್ ಕೂಡ ಆಗಬಹುದು.