ಚುನಾವಣಾ ಆಯೋಗ ಕೈಗೊಂಡಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆ ಸಾಮಾನ್ಯವಾಗಿ ಮತದಾರರ ಮಾಹಿತಿಯನ್ನು ನವೀಕರಿಸುವ ಆಡಳಿತಾತ್ಮಕ ಕಾರ್ಯ. ಆದರೆ, ಇದೇ ಪ್ರಕ್ರಿಯೆ ಮೂರೂವರೆ ದಶಕಗಳಿಂದ ದೂರವಾಗಿದ್ದ ಇಬ್ಬರು ಸಹೋದರರನ್ನು ಮತ್ತೆ ಒಂದಾಗಿಸಿದ ಅಪರೂಪದ ಘಟನೆಗೆ ಸಾಕ್ಷಿಯಾಗಿದೆ.ಸುಮಾರು 35 ವರ್ಷಗಳ ಬಳಿಕ ಅಣ್ಣ-ತಮ್ಮಂದಿರು ಮುಖಾಮುಖಿಯಾಗಿ ಭೇಟಿಯಾಗಿ ಪರಸ್ಪರ ತಬ್ಬಿಕೊಂಡು ಕಣ್ಣೀರಿಟ್ಟಿರುವ ಘಟನೆ ಸ್ಥಳೀಯರಲ್ಲಿ ಭಾವುಕತೆಯನ್ನು ಮೂಡಿಸಿದೆ.
ಬಾಲ್ಯದಲ್ಲೇ ಕುಟುಂಬದಿಂದ ದೂರವಾಗಿದ್ದ ಸೀತಾರಾಮ್
ವಿಕಲಚೇತನರಾಗಿರುವ ಸೀತಾರಾಮ್ ಅವರು ಬಾಲ್ಯದಲ್ಲೇ ಕುಟುಂಬದಿಂದ ಬೇರ್ಪಟ್ಟು ಪಂಜಾಬ್‌ಗೆ ತೆರಳಿದ್ದರು. ಅಲ್ಲಿ ಜೀವನ ಸಾಗಿಸಲು ಸಾಕಷ್ಟು ಕಷ್ಟಗಳನ್ನು ಎದುರಿಸಿದ ಅವರು, ಆರಂಭದಲ್ಲಿ ಖಾಸಗಿ ಶಾಲೆಯೊಂದರಲ್ಲಿ ಪ್ಯೂನ್ ಆಗಿ ಕೆಲಸ ಮಾಡುತ್ತಿದ್ದರು.ನಂತರ ತಮ್ಮ ಪರಿಶ್ರಮದಿಂದ ಪಂಜಾಬ್ ಸರ್ಕಾರದಲ್ಲಿ ಗ್ರೂಪ್-ಡಿ ನೌಕರಿ ಗಿಟ್ಟಿಸಿಕೊಂಡು ಅಲ್ಲಿಯೇ ನೆಲೆಸಿದ್ದರು. ವರ್ಷಗಳು ಕಳೆದರೂ ತಮ್ಮ ಬಾಲ್ಯದ ಊರು, ಕುಟುಂಬ ಹಾಗೂ ಸಹೋದರರ ನೆನಪುಗಳು ಅವರ ಮನಸ್ಸಿನಲ್ಲಿ ಉಳಿದಿದ್ದವು.
ಹಳೆಯ ಶಾಲಾ ಪ್ರಮಾಣಪತ್ರಕ್ಕಾಗಿ ಸ್ವಗ್ರಾಮಕ್ಕೆ ಆಗಮನ
ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆ ಹಿನ್ನೆಲೆಯಲ್ಲಿ ಸೀತಾರಾಮ್ ಅವರಿಗೆ ತಮ್ಮ ಹಳೆಯ ಶಾಲಾ ದಾಖಲೆ ಹಾಗೂ ಪ್ರಮಾಣಪತ್ರದ ಅಗತ್ಯವಿತ್ತು. ಈ ಕಾರಣಕ್ಕಾಗಿ ಅವರು ಬರೋಬ್ಬರಿ 35 ವರ್ಷಗಳ ನಂತರ ತಮ್ಮ ಸ್ವಗ್ರಾಮ ಮನೋಹರಪುರಕ್ಕೆ ಮರಳಿದರು.ಅವರು ಬಾಲ್ಯದಲ್ಲಿ ಓದಿದ್ದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ತೆರಳಿ ತಮ್ಮ ಹಳೆಯ ದಾಖಲೆಗಳಿಗಾಗಿ ಮಾಹಿತಿ ನೀಡಿದರು. ಶಾಲಾ ಸಿಬ್ಬಂದಿ ದಾಖಲೆಗಳನ್ನು ಪರಿಶೀಲಿಸಿದರೂ, ಸೀತಾರಾಮ್ ಅವರ ಗುರುತನ್ನು ಖಚಿತಪಡಿಸಿಕೊಳ್ಳಲು ಗ್ರಾಮಸ್ಥರ ಸಹಾಯ ಪಡೆಯಲು ಮುಂದಾದರು.ಈ ಸಂದರ್ಭದಲ್ಲಿ ಶಾಲಾ ಸಿಬ್ಬಂದಿ ನಡೆಸಿದ ದೂರವಾಣಿ ಕರೆಯೊಂದು ಸೀತಾರಾಮ್ ಅವರ ಅಣ್ಣ ಕೃಷ್ಣ ಅವರನ್ನು ತಲುಪಿತು. ಹಲವು ವರ್ಷಗಳಿಂದ ಸಂಪರ್ಕವಿಲ್ಲದೆ ದೂರವಾಗಿದ್ದ ತಮ್ಮ ಸೀತಾರಾಮ್ ಊರಿಗೆ ಮರಳಿದ್ದಾರೆ ಎಂಬ ಸುದ್ದಿ ಕೃಷ್ಣ ಅವರಿಗೆ ತಿಳಿಯಿತು.ಸುದ್ದಿ ಕೇಳುತ್ತಿದ್ದಂತೆಯೇ ಕೃಷ್ಣ ಅವರಿಗೆ ಸಂತೋಷಕ್ಕೆ ಪಾರವೇ ಇರಲಿಲ್ಲ. ತಕ್ಷಣವೇ ಶಾಲೆಯತ್ತ ಧಾವಿಸಿದ ಅವರು, ವರ್ಷಗಳ ನಂತರ ತಮ್ಮ ತಮ್ಮನನ್ನು ಕಣ್ಣಾರೆ ಕಂಡರು.
35 ವರ್ಷಗಳ ಬಳಿಕ ಭಾವುಕ ಕ್ಷಣ
ಶಾಲೆಯ ಆವರಣದಲ್ಲಿ ಅಣ್ಣ-ತಮ್ಮಂದಿರು ಮುಖಾಮುಖಿಯಾದ ಕ್ಷಣ ಅತ್ಯಂತ ಭಾವುಕವಾಗಿತ್ತು. ಸುಮಾರು ಮೂರುವರೆ ದಶಕಗಳ ವಿರಹದ ಬಳಿಕ ಒಬ್ಬರನ್ನೊಬ್ಬರು ತಬ್ಬಿಕೊಂಡು ಕಣ್ಣೀರಿಟ್ಟರು.ಸೀತಾರಾಮ್ ಅವರು ಭಾವುಕರಾಗಿ ತಮ್ಮ ಅಣ್ಣ ಕೃಷ್ಣ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು. ಈ ದೃಶ್ಯವನ್ನು ಕಂಡ ಶಾಲಾ ಸಿಬ್ಬಂದಿ ಹಾಗೂ ಗ್ರಾಮಸ್ಥರೂ ಭಾವುಕರಾದರು.ಇಷ್ಟು ವರ್ಷಗಳ ಬಳಿಕ ಕುಟುಂಬದ ಸದಸ್ಯರು ಮತ್ತೆ ಒಂದಾಗಿರುವುದು ಎಲ್ಲರ ಮನದಲ್ಲೂ ಸಂತಸ ಮೂಡಿಸಿತು.
ಭಾವುಕ ಪುನರ್ಮಿಲನದ ಬಳಿಕ ಇಬ್ಬರೂ ಸಹೋದರರು ಒಟ್ಟಾಗಿ ತಮ್ಮ ಮನೆಗೆ ತೆರಳಲು ನಿರ್ಧರಿಸಿದರು. ಕೊನೆಗೆ ಅಣ್ಣ-ತಮ್ಮ ಇಬ್ಬರೂ ಒಂದೇ ಸ್ಕೂಟರ್‌ನಲ್ಲಿ ಕುಳಿತು ತಮ್ಮ ಮನೆಗೆ ತೆರಳಿದರು.







