ಚಿಕ್ಕಮಗಳೂರು : ಸಚಿವ ಸಿ.ಟಿ ರವಿ ಅವರಿಗೂ ಕೊರೊನಾ ಆತಂಕ ಎದುರಾಗಿದ್ದು, ಇಂದು ಮತ್ತೆ ಕೊರೊನಾ ಟೆಸ್ಟ್ ಮಾಡಿದ್ದಾರೆ. ಈ ಹಿಂದೆ ಎರಡು ಬಾರಿ ಕೋವಿಡ್ ಟೆಸ್ಟ್ ಮಾಡಿದ್ದ ರವಿಗೆ ಒಮ್ಮೆ ನೆಗಟಿವ್, ಇನ್ನೊಮ್ಮೆ ಪಾಸಿಟಿವ್ ಎಂದು ಬಂದಿತ್ತು.
ನಿನ್ನೆ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಅವರು ಸಿ.ಟಿ ರವಿ ಅವರಿಗೆ ಕೊರೊನಾ ಸೋಂಕಿದೆ ಎಂದಿದ್ದರು. ಇದಕ್ಕೆ ಟ್ವಿಟ್ಟರ್ ನಲ್ಲಿ ಉತ್ತರಿಸಿದ್ದ ರವಿ, ನಾನು ಆರೋಗ್ಯವಾಗಿದ್ದೇನೆ, ಯಾವುದೇ ಸೋಂಕಿನ ಲಕ್ಷಣಗಳಿಲ್ಲ ಎಂದಿದ್ದರು. ಆದ್ರೆ ಅವರ ಕೊರೊನಾ ಟೆಸ್ಟ್ ವರದಿ ಪಾಸಿಟಿವ್ ಎಂದು ಬಂದಿತ್ತು. ಈ ವರದಿ ಆಧಾರದ ಮೇಲೆ ಸುಧಾಕರ್ ಅವರು ರವಿಗೆ ಸೋಂಕಿ ಇದೆ ಎಂದಿದ್ದರು.
ಇದೀಗ ಮತ್ತೊಮ್ಮೆ ಸಿ.ಟಿ ರವಿ ಕೊರೊನಾ ಟೆಸ್ಟ್ ಗೆ ಒಳಗಾಗಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ‘ಒಂದು ವಾರದೊಳಗಿನ ಎರಡು ಟೆಸ್ಟ್ಗಳಲ್ಲಿ ಒಮ್ಮೆ ನೆಗೆಟಿವ್, ಒಮ್ಮೆ ಪಾಸಿಟಿವ್ ಬಂದಿದೆ. ಅದಕ್ಕಾಗಿ ನಾನು ಇಂದು ಮೂರನೇ ಟೆಸ್ಟ್ ಮಾಡಿಸಿದ್ದೇನೆ. ಥರ್ಡ್ ಅಂಪೈರ್ ರಿಸಲ್ಟ್ಗಾಗಿ ಕಾಯುತ್ತಿದ್ದೇನೆ’ ಎಂದು ಬರೆದುಕೊಂಡಿದ್ದಾರೆ. 








